ಗುರುವಾರ, ಸೆಪ್ಟೆಂಬರ್ 13, 2012

ಹೊಂಬೆಳಕ ಆಶಿಸೋಣ

ಹುಟ್ಟುವಾಗ ಅಳುವಿಂದ ಆರಂಭಿಸುವ ನಾವು
ಜನುಮ ಪೂರ್ತಿ ನಗುವನ್ನೇ ಬಯಸುವೆವು
ಹಣದ ಮೋಹದ ಮುಂದೆ
ಪ್ರೀತಿ ಸಂಭಂದಗಳು ಮಂಕಾಗುವುದೇಕೆ

ಜಾತಿ ಧರ್ಮ ಮೇಲು-ಕೀಳೆಂಬ ಅಂತರವ ಹುಟ್ಟುಹಾಕಿ
ಮಾನವತೆಯನ್ನು ಮರೆಯುವತ್ತ ಸಾಗಿದೆವೇಕೆ ಪಯಣ
ಯೋಗ ಧ್ಯಾನವ ಮೀರಿ ಸತ್ಯ ದೇವತೆಯ ಮರೆತು
ಭೋಗ ಕಾಮನೆ ಪಡೆಯುವತ್ತ  ಚಿತ್ತ ವಾಲುವುದೇಕೆ

ಹುಟ್ಟು-ಸಾವು ಸಹಜದಂತೆ ಸೋಲು ಗೆಲವು ಸಾಮಾನ್ಯ
ಸಂತಾಪ ಸಮಾಧಾನಕ್ಕಿಂತ  ಪ್ರೋತ್ಸಾಹದ ಕಂಪ ಸೂಸು
ಭರವಸೆಯು ಭರಚುಕ್ಕಿಯಾಗಿ ಬಾಳ ಬೆಳಕಾಗಿ
ಸೋದರ ಸಮಾನತೆಯ ಸೊಂಪು ಹಾಕು

ಕನಸು ಎಂದಾದರು ಕಪ್ಪು-ಬಿಳುಪು ಅಗುವುದುಂಟೆ
ಆಶಿಸೋಣ ಜೀವನ ಕಾಮನಬಿಲ್ಲಿನ ಚಿತ್ತಾರ
ಆಸೆ ಅಸೂಯೆಯ ಅರಗಿಸಿ
ಸ್ನೇಹದ ಕದಂಬ ಬಾಹುವನ್ನು ಎಲ್ಲೆಡೆ ಚಾಚೋಣ
(ರಾ.ಹೊ.)