ಸೋಮವಾರ, ಜೂನ್ 11, 2012

ಮಳೆಯಲಿ ಮಲೆಮನೆಯಲಿ...

ಈ ಬಿರು ಬೇಸಿಗೆಯಲಿ ಆ ಮಲೆಮನೆಯ ಮಡಿಲಲ್ಲಿ ಕಳೆದ ಸವಿ ನೆನಪನ್ನು ಮೆಲಕು ಹಾಕಿಕೊಳ್ಳುವುದೇ ಏನೋ ರೋಮಾಂಚನ...!!! ಮೊದಲ ಭೇಟಿಯಲ್ಲಿ ಜಲಪಾತದ ಎರಡನೆಯ ಹಂತದಲ್ಲೇ ಮುಕ್ತಾಯ ಮಾಡಿದ ಆ ಅಪೂರ್ಣತೆಯ ಅಳಿಸಲು ಕಳೆದ ಆಗಸ್ಟ್  ನಲ್ಲಿ ನಾನು ಮತ್ತು ನನ್ನಿಬ್ಬರು ಗೆಳೆಯರೊಂದಿಗೆ ಹೊನ್ನಾವರದತ್ತ ನಮ್ಮ ಪಯಣ. ಮುಂಜಾನೆಯಲಿ ಮೊದಲ ಬಸ್ಸನ್ನು ಹಿಡಿದು ಗೇರುಸೊಪ್ಪ ತಲುಪಿದ ನಾವು ಅಲ್ಲಿ ಕಾರ್ಣಿಕ ವೀರಾಂಜನೇಯನ ಅನುಗ್ರಹ ಪಡೆದು ಮುಂದಿನ ೫ ಮೈಲನು ಖಾಸಗೀ ವಾಹನದ ಮೂಲಕ ತಲುಪಿ ಹೊಸ ಅನ್ವೇಷಣೆಯ ಚಾರಣಕ್ಕೆ ಅಣಿಯಾದೆವು.
ಜಲಪಾತದ ಎರಡನೆಯ ಹಂತದವರೆಗೆ  ಅರಣ್ಯ ಇಲಾಖೆಯವರು ಮಾಡಿದ ಕಚ್ಚಾ ದಾರಿಯಿದ್ದು  ವಿರಳ ಜನ ಸಂಚಾರದಿಂದ ಗಿಡ-ಬಳ್ಳಿಗಳು ಎಲ್ಲಡೆ ಅವ್ರತವಾಗಿರುವುದರಿಂದ ನಾವು ಜಲಪಾತದ ಮೊದಲ ಹಂತದವರೆಗೆ ಮಳೆಗಾಲವನ್ನು ಹೊರತು ಪಡಿಸಿದರೆ ಸುಲಭವಾಗಿ ತಲುಪಬಹುದು. ನಾವು ಒಂದು ಸಣ್ಣ ತೊರೆಯ ದಾಟಿದ ನಂತರ ಕೆಲದಿಕ್ಕಿನಲಿ ಹರಿಯುತ್ತಿರುವ ಹಳ್ಳವ ಹಿಂಬಾಲಿಸಲಾರಂಭಿಸಿದೆವು. ೧೫ ನಿಮಿಷದ ಚಾರಣದ ನಂತರ ಜಲಪಾತದ ಮೊದಲ ಹಂತದ ಬುಡವನ್ನು ತಲುಪಿದೆವು.

ಜಲಪಾತದ ಎರಡನೆಯ ಹಂತವು ೫೦ ಅಡಿ ಎತ್ತರವಿದ್ದರೆ, ದೂರದ ಬೆಟ್ಟದ ಹಸಿರಿನ ಸಾಲಿನ ಮಧ್ಯ ಬಿಳಿಯ ಮಂದಾರ ಕುಸುಮದಂತೆ ಗೋಚರಿಸುವ ಮೊದಲನೇ ಹಂತವು ೩೦೦ ಅಡಿ ಎತ್ತರದಿಂತ ಮಲೆಮನೆ ಬೆಟ್ಟದ ಒಂದು ಮಗ್ಗಲಿನಿಂದ ನೇರವಾಗಿ ಕೆಳಗೆ ಧುಮುಕುತ್ತಿರುವಂತಿದೆ. ಕೆಲವು ನಿಮಿಷಗಳವರೆಗೆ ಹಾಗೆ ಮನೋಹರವಾದ ಜಲಪಾತವ ಪೂರ್ಣ ರೂಪವನ್ನು ನೋಡುತ್ತಾ ನಮ್ಮ ಮುಂದಿನ ನಡೆಯ ಬಗ್ಗೆ ಯೋಚಿಸಲಾರಂಭಿಸಿದೆವು.
ಜಲಪಾತದ ಮೊದಲ ಹಂತಕ್ಕೆ ಯಾವುದೇ ಹಾದಿ ಇಲ್ಲದಿರುವುದರಿಂದ ನಮ್ಮದೇ ಲೆಕ್ಕಾಚಾರದಲ್ಲಿ ಭಯಾನಕ ಕಾನನದ ನಡುವೆ ಏಳು-ಬೀಳುಗಳೊಂದಿಗೆ ಹುಚ್ಚು ಧೈರ್ಯ ಮತ್ತು ಹುಂಬ ಛಲದಿಂದ ರಕ್ತ ಹೀರುವ ಇಂಬುಳ
 (ಜಿಗಣೆ) ಗಳನ್ನೂ ಲೆಕ್ಕಿಸದೆ ಮೊದಲನೇ ಹಂತದ ಹತ್ತಿರ ತಲುಪಲು ಸಫಲಾರಾದೆವು. ಆದರೆ ಅಲ್ಲಿ ನೋಡಿದ್ದೇ ಬೇರೆ...!

ಇಲ್ಲಿ ಜಲಪಾತವು ಮೂರು ಹಂತದಲ್ಲಿ ವಿಶಾಲ ಬಂಡೆಯ ಕೋಟೆಯ ನಡುವೆ ಧುಮುಕುತ್ತಿದ್ದು ನಮ್ಮ ಮುಂದಿನ ಹಾದಿ ಕಠಿಣವಾಗಿತ್ತು. ಕಡಿದಾದ ಜಾರುವ ಬಂಡೆಗಳನ್ನು ಯಾವುದೇ ಉಪಕರಣದ ಸಹಾಯವಿಲ್ಲದೆ ಬೀಳುವ ಜಲಪಾತಕ್ಕೆ ವಿರುದ್ಧವಾಗಿ ಪ್ರಪಾತದ ಅಂಚಿನಿಂದ ಧೋ ಎನ್ನುವ ಮಳೆಯಲ್ಲಿ ಹತ್ತುವಾಗ ಸಿಕ್ಕ ಆ ಎದೆ ಝಲ್ಲೆನಿಸು ಮೋಜು ಇನ್ನೆಲ್ಲಿಂದ ಸಿಗಬೇಕು ಹೇಳಿ?

ತುಂಬಾ ಹೊತ್ತಿನ ಪರಿಶ್ರಮದ ನಂತರ ಕ್ಷಿರಧಾರೆಯ ಮಧ್ಯಮ ಹಂತ ತಲುಪಿದಾಗ ಆ ಕ್ಷಿರಧಾರೆಯ ನಿಜ ಅಂದವ ನೋಡಿ ಮಂದಹಾಸದೊಂದಿಗೆ ಮೂಕವಿಸ್ಮಿತರಾದೆವು. ಚಾರಣ ಪ್ರಿಯರಿಗೆ ಇಂತ ಸಾಧನೆಯಲ್ಲಿ ಸಿಗುವ ಕುಶಿ ಬೇರೆಯವರಿಗೆ ಹುಚ್ಚುತನ ಎನಿಸಿದರೂ ಅದರ ಸವಿ ಅನುಭವಿಸಿ ತಿಳಿದವರಿಗೇ ಗೊತ್ತು ಅನ್ನಿ. ಮಲೆಮನೆ ಜಲಪಾತವನ್ನು ಮದುವಣಗಿತ್ತಿಯ ರೂಪದಲ್ಲಿ ನೋಡಬೇಕಾದರೆ ಮಳೆಗಾಲದಲ್ಲೊಮ್ಮೆ ಭೇಟಿಕೊಡುವುದು ಒಳಿತು.
(ರಾ.ಹೊ.)

3 ಕಾಮೆಂಟ್‌ಗಳು: