ನೀ ಹಣೆದ ಪ್ರೀತಿಯ ಜಡೆಯಲಿ
ಕನಸೆಂಬ ಹೂವನು ಕಟ್ಟಿ
ಮನಸೆಂಬ ಮುಡಿಯಲಿ ಮುಚ್ಚಿಟ್ಟೆ
ಕನಸಿನ ಮಲ್ಲಿಗೆ ಮೆಲ್ಲಗೆ ಘಮ ಘಮಿಸಲು
ಮನಸು ಸುಮಧುರ ಆಹ್ಲಾದವ ಅಲೆಯಲಿ
ತನ್ನೊಲುಮೆಯ ತಂಗಾಳಿಯನು
ಪ್ರತಿ ಉಸಿರಲು ಭುಂಜಿಸಲು
ಹತ್ತಿರದ ವಡನಾಟ ಸುಖದ ನೋಂಪಿಯದ
ನಳನಳಿಸುವ ಕಿರೀಟವ ತೊಡಿಸಿ
ಹೊಸ ಆಸೆ ಗರಿಗೆದರಿ ಹಾರತೊಡಗಿದೆ...
ನನ್ನ ಚಿತ್ತ ನಿನ್ನಲಿ ಸ್ಥಿತವಾಗಿ
ಭಾವನೆಗಳು ಅನುರಕ್ತವಾಗಿ
ನಿನ್ನ ಸ್ಪರ್ಶ ವಿಹಿತವಾಗಿ
ನಿನ್ನೊಲುಮೆಯ ಮಾತು ಅನುರಾಗವಾಗಿ
ಇರುಳಿನ ಕನಸಿನ ಕೂಪದಿಂದ
ನಿನ್ನಿರುವಿಕೆಯು ನಸುಗಂಪು ಮುಂಜಾನೆಯ
ಮನೋಭೂಮಿಕೆಯಲಿ ನೇಸರನ ಕಿರು ನೋಟದಂತೆ
ಬದುಕಿನ ಚಿತ್ರಣ ರಂಗಾಗಿಸಿದೆ...
ನಿನ್ನ ಆ ಅನಿರೀಕ್ಷಿತ ಅಗಳುವಿಕೆಯು
ನನ್ನ ಅಲುಗಾಡಿಸಿ ಅದರ ಪ್ರತಿಚ್ಛಾಯೆವೆಂಬಂತೆ
ಕನಸಿನ ಕಟ್ಟೆ ಒಡೆದು
ಬಾಡಿದ ಕನಸಿನ ಹೂವು ಕಣ್ಣಂಚಿನಲಿ ಕಂಬನಿಯಾಗಿ
ಕೆಳಗುರಿಲಿತು ಅದರಲಿ ಒಂದು ಹನಿ ಇಂದು
ಕವನವಾಗಿ ನಿಮ್ಮ ಮುಂದೆ...
(ರಾ.ಹೊ.)