ಭಾನುವಾರ, ಜನವರಿ 13, 2013

ವರ್ಷ ಧಾರೆ

 
ಅಗಲುವಿಕೆಯ ವಿರಹ ವೇದನೆಯ ತಾಳಲಾಗದೆ
ವಸುದೆಯು ಬಾಡಿ ಕಳೆಗುಂದಿದ ವದನದಲಿ 
ವರುಣನ ಬರುವಿಕೆಯ ನೋಡ್ತವ್ಲೆ ....
ವರುಣನ ಮನದಲಿ ಮನೆ ಮಾಡಿದ ಕಾಮನೆಗಳ
ಕಾರ್ಮೋಡಗಳು ಒಳಗೊಳಗೆ ತಿಕ್ಕಾಟ ಮಾಡಿ 
ವಸುದೆಯ ಮೈ ಬಿಸಿಯ ಬಯಸಿ 
ಅವಳ ಸಾನಿಧ್ಯಕ್ಕೆ ಹತೊರಿತವ್ನೆ ...
ಕೂಡಿಟ್ಟ ಕಾಮನೆಗಳು 
ವರ್ಷ ಧಾರೆಯಾಗಿ ಜಿನುಗಿ 
ವಸುದೆಯ ಮೈ ತೋಯ್ದು
ಹಸಿರ ಉಡಿಗೆ ತೊಡಿಸಿ
ಹೊಸ ಮದುವಣಗಿತ್ತಿಯಾಗಿಸಿ
ಕಾಮನಬಿಲ್ಲಿನ ಕಿರೀಟ ತೊಡಿಸಿ
ಅವಳ ಜೀವ ನಾಡಿಯಾಗಿ ಹರಿದವ್ನೆ ...
ಇತ್ತ ಮುಗಿಲ ಮರೆಯಲಿ 
ಇದ ಕಂಡು ಕಾಣದಂತೆ ರವಿಯು
ಇಣುಕು ನೋಟವ ಬೀರ್ತವ್ನೆ ... 
ರಾ.ಹೊ

ಶುಕ್ರವಾರ, ಜನವರಿ 11, 2013

ಅನುದಿನವು ಅರುಣೋದಯವಾಗಲಿ

ಮೋಹದ ಪರದೆಯ ಮುಸುಕ ಸರಿಸಿ
ಪ್ರೀತಿಯ ಪರವಶತೆಯಿಂದ ಹೊರ ಬಂದು
ಅವಲೋಕಿಸು ನನ್ನ ನೈಜತೆಯನ್ನ
ಇಜಾಡು ಪಾರದರ್ಶಕ ತಿಳಿಗೊಳದಲ್ಲಿ


ಮನಸಿನ ಮಾತ ಕೇಳು
ಕನಸಿಗೆ ಶೀರ್ಷಿಕೆ ಆಗು
ಜೀವ ಭಾವವ ಬೆಸೆಯು
ಒಲವ ಹೂ ಮಳೆ ಹರಿಸು

ನನ್ನ ಬಾಳ ಉಸಿರಾಗಿ
ನನ್ನೊಲುಮೆಯ ಮಾತ ಕೇಳಿ 
ನನ್ನೆದೆಯ ತಂಪು ಮಾಡು
ಈ ಜೀವಕೆ ಹೊಸ ಕಂಪ ಬೀರು


ಕಣ್ಣಿನ ಕನಸಿಗೆ ಬಣ್ಣವ ತುಂಬಿ 
ಅಮೃತದ ಹನಿಯ ಸವಿಯ ಉಣಿಸು
ಮಧುರಾನುಭೂತಿಗೆ ನಾಂದಿ ಹಾಡಿ
ಬೆಳಕಾಗಿಸು ಬಾ ಈ ಬಾಳ

ನಿನ್ನ ಸಾಮಿಪ್ಯದಲಿ ತುಟಿಗಳು
ಮಾತು ಹೊರಡದೆ ಸುಮ್ಮನಿರಲು
ನಿನ್ನ ಆ ಹೂ ಮುತ್ತ ಮನ ಬಯಸಿದೆ
ಒಮ್ಮೆ ಎತ್ತಿ ಬಿಗಿದಪ್ಪಿ ಮುದ್ದಾಡಲೇ?


ಆ ಮುದನೀಡುವ ನೆನಪುಗಳು
ಸದಾ ಕನಸಕಾಣುವ ಮನಸುಗಳು
ಒಲವ ಚಪ್ಪರದಲಿ ನಿನ್ನ ಪೂಜಿಸುತ
ಅನುದಿನವು ಅರುಣೋದಯವ  ಆಶಿಸುವೆ 
ರಾ.ಹೊ

ಭಾನುವಾರ, ಜನವರಿ 6, 2013

ಪ್ರೀತಿ ಚಿರಂತರ...


ಸ್ನೇಹದ ಮೊಗ್ಗಲಿ ಅನುರಾಗವು ಅರಳಿ ಪ್ರೀತಿಯ ಕಂಪ ಸೂಸಿ
ಗೆದ್ದಲು ಹಿಡಿದ ಮನಸನು ತಿಳಿಯಾಗಿಸಿತು
ಕಾರಣವಿಲ್ಲದೆ ಹುಟ್ಟುವ ಪ್ರೀತಿ ರೆಪ್ಪೆ ಮಿಡಕುವದರಲ್ಲಿ
ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ

ನಿನ್ನ ಸವಿ ಮಾತು ಸದಾ ಸಪ್ತ ಸ್ವರದಂತೆ
ನಿನ್ನ ಪ್ರತಿ ನಗುವಿನಲು ಚಂದಿರನ ಸಂಚಲನ
ನಿನ್ನ ನೀಲ ಕಂಗಳಲಿ ಅದೆಂತಾ ಮಿಂಚು
ನಿನ್ನ ಹಾವ ಭಾವದಲಿ ಅದೇನೋ ಸಡಗರ
ನಿನ್ನ ಮುಂದೆ ತೃಣ ಮಾತ್ರ ಸಿರಿ ಭೋಗ
ನಿನ್ನ ಕನಸನ್ನು ನನ್ನ ಕನಸಂತೆ ಕಾಣುವೆ
ನಿನ್ನ ಪ್ರತಿ ಹೆಜ್ಜೆಯಲ್ಲೂ ಒಲವ ಮಳೆ ತರುವೆ
ನಿನ್ನ ಸನಿಹವೇ ಸದಾ ಸುಂದರ ಸುಮಧುರ
ನಿನಗಾಗಿ ಹುಟ್ಟಿದ ಈ ಪ್ರೀತಿ ಚಿರಂತರ
ಇನ್ನೂ ಯಾಕೆ ಈ ವಿರಹದ ಅಂತರ...