ಮೊದಲ ಪ್ರೀತಿಯ ಅನುಭೂತಿಯು
ಮುಂಜಾನೆಯ ಮುತ್ತಿನ ಹನಿಯಾದರೆ
ಇನ್ನೊಮ್ಮೆ ಚಿಮ್ಮಿದ ಅನುರಾಗದ
ವರ್ಷ ಧಾರೆಯ ಪುಟ್ಟ ಹನಿಯು
ಶುದ್ಧ ಧವಳತೆಯ ಮುತ್ತಾಯಿತು
ಮನಸಿನ ಚಿಪ್ಪಿನಲ್ಲಿ ಶಾಶ್ವತವಾಯಿತು
ಊಹಿಸದೇ ಮನಸ್ಸನ್ನು ಹೊಕ್ಕು ಕಚಗುಳಿಯಿಟ್ಟು
ಹೃದಯವನ್ನು ಹೂವಾಯಿಸಿ
ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸಿ
ಬೆಂದು ಬಸವಳಿದ ಬಾಳ ಸಂಪನ್ನಗೊಳಿಸಿ
ಬದುಕು ಮುಗಿಯುವವರೆಗೂ ಪ್ರೀತಿಯು
ಕಿಂಚಿತ್ತೂ ಕಡಮೆಯಾಗದಂತೆ ಆರಾಧಿಸುವ
ಅದು ಚೈತ್ರ ತಂದ ಚಿಗುರಂತೆ
ಚೆಂದುಟಿಯ ಮೇಲೆ ನಳನಳಿಸುವ ಹೂನಗೆಯಂತೆ
ಕರ್ಣಾನಂದಕರವಾದ ಮಧುವಂತಿ ರಾಗದಂತೆ
ಅತಿ ನವ್ಯ ರಸ ಗಾಯನದ ಅಲೆಯಲ್ಲಿ ತೇಲಿಸಿ
ಹೃದಯಂತರಾಳದೊಳಕ್ಕೆ ಬಂದು ಸೇರಿತು
ಕಾಲ ಕಾಲವಾಗುವವರೆಗೆ..
ಆ ನಿನ್ನ ಸವಿಯಾದ ಸ್ನೇಹಲತೆ
ಏನ್ನನೋ ಹೇಳ ಬಯಸುವ ಕಂಗಳು
ಇರುಳನ್ನೇ ನಾಚಿಸುವಂಥ ಮುಂಗುರುಳು
ನಿತಂಬದವರೆಗಿನ ಜಾರಿದ ನವಿರಾದ ಜಡೆ
ಮನಸ್ಸನ್ನು ಕಲಕಿ ಮಧುರ ಭಾವದಲೆ ಎಬ್ಬಿಸಿ
ಸುಂದರ ಬಾಳ ಪ್ರಯಾಣಕೆ ಸುಪ್ಪತ್ತಿಗೆಯಾಯಿತು
ನೀ ಬದುಕನ್ನು ಇಷ್ಟ ಪಡುವ ರೀತಿಯಲಿ
ಆ ನಿನ್ನ ಹಾಲಿನ ಮನಸ್ಸಿನ ಆಸೆ ಆಕಾಂಕ್ಷೆಗಳ
ಸಾಕಾರಗೊಳಿಸಲು, ಸರಳತೆಯ ಮಾನದಂಡದಲಿ
ಭವಿಷ್ಯದ ಕನಸಿನ ಮಾಲೆಯನ್ನು ಬದಲಿಸಿ
ಬದುಕಿನ ನೀರವತೆಯನ್ನು ಕಳೆದು
ಯಶಸ್ಸಿನ ಸುಂದರ ಬಾಳು ಕಟ್ಟೋಣ
(ರಾ.ಹೊ.)