ಶುಕ್ರವಾರ, ಮಾರ್ಚ್ 22, 2013

ಸುಮಧುರ ಭಾವನೆಯು

ಮುಸ್ಸಂಜೆಯ ಮಧು ಸಿಂಚನ
ನಿನ್ನದರದ ಆ ಕಂಪನ
ಸುಮಧುರ ಭಾವನೆಯು
ಸಮ್ಮೋಹನ ನಿನ್ನ ನಡೆಯು
 
ನಿನ್ನೀ ಸೊಬಗಿನ ಒನಪು ಒಯ್ಯಾರಕೆ
ತುಟಿಗಳೇ ನಾಚುತಿವೆ
ನಿನ್ನೀ ತನುವ ಪರಿಮಳಕೆ
ನಾನೆಲ್ಲೋ ತೇಲುತಿಹೆ

ನಿನ್ನೀ ಕಾಲ್ಗೆಜ್ಜೆ ದನಿಯೊಳಗೆ
ಎದೆಬಡಿತ ಬೆರೆಯಲು
ಕೈಯ ಬಳೆಯ ನಾದಕೆ
ಹೃದಯವೇ ಜಾರಿಹಿದು

ಪ್ರೀತಿಯ ಮೊದಲ ಮಳೆಯ ಕಂಪು
ನನ್ನೆದೆಯಲಿ ತಂಪ ಬಳಿಸಿ
ನಿನ್ನ ಸ್ಪರ್ಶಿಸುವ ಆ ಗಾಳಿ
ನನ್ನ ಉಸಿರ ಬೆಸೆಯಿತು


ನಿನ್ನುಸಿರಲೇ ಕಲೆತಿಹೆನು
ಮೈಮರೆತು ಹೋಗಿಹೆನು
ಹಸಿದ ಕನಸಿಗೆ ಜೀವ ತುಂಬಿ
ಹೊಸತನ ರಸದ ಗಳಿಗೆ

ನನ್ನೀ ಎದೆಯ ವೀಣೆಯ ಮೀಟಿ
ನಡುವಲ್ಲಿ ಚೈತನ್ಯ ನರ್ತಿಸಲು
ಪ್ರೇಮ ರಾಗವ ಹರಿಸಿಹೆ
ಮೃದುಲ ಆಲಿ೦ಗನದ ಬಿಗಿ ಬ೦ಧನ

ಪ್ರಣಯ ಸುಖದಿ ತ೦ಪುಸೋನೆ
ಒಡಲಲ್ಲಿ ಸವಿ ಭಾವ ತರ೦ಗ
ಎದೆಯಲಿ ಮೃದು ಕ೦ಪನ
ಸಪ್ತ ಸ್ವರದ ಹೃದಯ೦ಗಮ

ನೀ ಕಡಲು ನಾ ತೀರ
ನನ್ನದೆಯನೆ ಸವೆಸಿಬಿಡು
ಆಸೆಯು ಸಾಗರವು
ನಿನ್ನಪ್ಪುಗೆ ಅಲೆಯಲದು ಸಾಕಾರವು


ಪ್ರೀತಿ ತಂದ ಈ ಸಿಹಿ ನೋವಿನಲಿ
ಬದುಕಾಗಿದೆ ಹೂವ ಹಂದರ
ಜಗವು ಸುಂದರ ನಿನ್ನೊಲಿವಿನಲಿ
ಅರಿಯದಾದೆ ನಿನ್ನೊಳಗೆ ನಾನು

ನಿನ್ನ ಸ್ಪರ್ಶ ತಂದ ಸೊಂಪು
ನನ್ನುಸಿರ ಆವರಣದಿ ಬೆಚ್ಚನೆ ಮುತ್ತನಿಟ್ಟು
ನಿನ್ನ ಪಕಳೆಯೊಳಗೆ ಬ೦ಧಿಯಾಗಿ
ನನ್ನ ನಾ ಧಾರೆ ಎರೆದೆ
ರಾ....

ಬುಧವಾರ, ಮಾರ್ಚ್ 13, 2013

ಒಲವಿನ ಹಣತೆ

ಸ್ನೇಹದ ಅನುರಾಗದಲಿ ಕಾರಣವಿರದೆ ಪ್ರೀತಿಯು
ಬದುಕ ಬಂಧನದಲಿ ನಿನ್ನಾಸರೆಯ ಚೆಲುವ ಚಿಲುಮೆಯು

ಮನಸಿನ ಮಂದಿರದಲಿ ಪ್ರೀತಿಯ ಅಸ್ತಿತ್ವವು
ನಿನ್ನ ಸಾಮೀಪ್ಯದ ಸೆರೆಯಲ್ಲಿ ಬಂದಿಯಾದ ಬದುಕು
ನಮ್ಮೀ ಬಂಧವ ಬಿಡಿಸಲಾಗದೆಂದಿಗೂ


ನನ್ನೀಕಂಗಳ ಕೊಳದೊಳಗೆ ನಿನ್ನದೇ ಬಿಂಬ
ಕನಸಿನ ಕಣಿವೆಯಲಿ ಹಿತಕಾಣುವ ಬದುಕು
ಉಸಿರ ಬಿಸಿ ಏರುತಿದೆ ನೆನಪಿನ ಸುಳಿದಾಟಕೆ
ನನ್ನುಸಿರು ನಿನ್ನುಸಿರಲೇ ಕಲೆತು ಹೋಗಿಹೆ
ನೀ ತಂದ ಹೊಸ ಬೆಳಕು ತನುಮನವ ತುಂಬಿದೆ

ಅನುದಿನವು ಒಲವಿನ ಹಣತೆಯ ಹಚ್ಚಿ
ನಾಳೆಯ ಬಾಳಿಗೆ ಸುಂದರ ಬೆಳಕಾಗಿ
ಪ್ರಿತಿಯನು ಜೀವದಿಂದ ತುಂಬಿ
ಸುಖದುಃಖವ ಸಮನಾಗಿ ನೋಡಿ
ಭುವಿಯ ಸೌ೦ದರ್ಯವ ಅಣು ಅಣುವು ಅನುಭವಿಸುವ

ಕನಸಿನ ಗೂಡನು ಹಸನಾಗಿಸಿ
ನನಸಿನ ಲೋಕಕೆ ಒಲವಿನ ರೆಕ್ಕೆ ಬಿಚ್ಚಿ ಹಾರುವ
ಮನಸ ಅರಿತು ಮುಂದೆ ಸಾಗುವ
ನಮ್ಮೀ ಸುಂದರಾನುಬಂಧದ ಸೊಬಗ ಮಾಸದಂತೆ
ಸದಾ-ಸಹ್ರದಯದಿಂದ  ಕಾಪಾಡುವ

ಮಂಗಳವಾರ, ಫೆಬ್ರವರಿ 19, 2013

ನಿಶ್ಚೆತಾಂಬುಲ:)

ಎಂದಿಲ್ಲದ ಮನಕೆ ಇಂದೇಕೋ ತವಕ
ನನ್ನರಗಿಣಿಯ ಇನಿಯನಾಗುವ ತನಕ
ನನ್ನೆದೆಯ ಆಸೆಯ ಕುಸುಮದ ಮಕರಂದವು
ಜೇನ ಕಂಪ ಬೀರಲು ನಿಶ್ಚಯವಾಗುತಿದೆ ಸುದಿನ

ಹೆ೦ಗಳೆಯರು ಹಿರಿಯರು ನಗುಮೊಗದ ಸುತ್ತು
ತಟ್ಟೆಯಲಿ ಅರಿಶಿನ ಕು೦ಕುಮ ವೀಳ್ಯವು
ಬಗೆ ಬಗೆಯ ಹಣ್ಣು ಹಂಪಲು ಹರಿವಾಣದಲಿ
ಅಟ್ಟೆ ಮಲ್ಲಿಗೆಯ ಕಟ್ಟು ಕೆಂಪು ಗೊಲಾಬಿಯ ಇಟ್ಟು


ಪಂಚಾಂಗ ಅಕ್ಷತೆ ಶುಭ ಸೂಚಿಸತುತಿರಲು
ಸಗಣಿ ಸಾರಿಸಿದ ಅಂಗಳದ ಅಂಕಣದಲಿ
ತುಂಬುಚಪ್ಪರದ ತಂಪಿನಡಿಯ ಚಾವಡಿಯಲ್ಲಿ
ಗುಸುಗುಸು ಕುಡಿನೋಟಗಳೆಲ್ಲದರ ನಡುವೆ


ಮನೋಕೋಶದ ತುಂಬ ನನ ರಾಧೆಯೇ ತುಂಬಿರಲು
ನೆನಪ ಹೂ ವನದಲ್ಲಿ ಮೈಮರೆತು ಕುಳಿತಿಹೆನು
ಇಂಚಿಂಚು ಕರಗುತ್ತ ಕಳೆದುಹೋಗುವ ಮೊದಲು
ನನ್ನೆದೆಯ ಹೂ ಅರಳಿಸಿ ಎದೆಭಾರ ಕಳೆಯಿಸು


ಬೆನ್ನಲೇ ಬೆಳಕನಿಟ್ಟು ನಿನ ದಾರಿಯ ಅರಸುತ
ಮೈದಳೆಯಿತು ಮನವು ಮಿಂಚುಹುಳದಂತೆ
ಓ ನನ್ನ ಅರಗಿಣಿಯೇ ಇಣುಕಿಯೇ ಸುಸ್ತೆ
ಸಾವಿರ ಬಾಳ ಫಲಗರೆವ ಒಂದು ಕುಡಿ ನೋಟಕೆ


ಮೊರದಗಲ ಮುಖ ಮಾಡಿ ಮೆಲ್ಲಗೆ ಬಳುಕುತ
ಮುಡಿತು೦ಬ ಮಲ್ಲಿಗೆ ಬೆನ್ನ ತು೦ಬ ಕೇಶರಾಶಿ
ತು೦ಬು ನೆರಿಗೆಯ ಸೀರೆ ನಸುನಾಚಿ ಬ೦ದಿಹಳು
ನನ್ನಗಲ ಎತ್ತರಕೆ ಸಾಕು ಈ ಪುಟ್ಟ ಪಾರಿವಾಳ

ರಾ.ಹೊ

ಭಾನುವಾರ, ಜನವರಿ 13, 2013

ವರ್ಷ ಧಾರೆ

 
ಅಗಲುವಿಕೆಯ ವಿರಹ ವೇದನೆಯ ತಾಳಲಾಗದೆ
ವಸುದೆಯು ಬಾಡಿ ಕಳೆಗುಂದಿದ ವದನದಲಿ 
ವರುಣನ ಬರುವಿಕೆಯ ನೋಡ್ತವ್ಲೆ ....
ವರುಣನ ಮನದಲಿ ಮನೆ ಮಾಡಿದ ಕಾಮನೆಗಳ
ಕಾರ್ಮೋಡಗಳು ಒಳಗೊಳಗೆ ತಿಕ್ಕಾಟ ಮಾಡಿ 
ವಸುದೆಯ ಮೈ ಬಿಸಿಯ ಬಯಸಿ 
ಅವಳ ಸಾನಿಧ್ಯಕ್ಕೆ ಹತೊರಿತವ್ನೆ ...
ಕೂಡಿಟ್ಟ ಕಾಮನೆಗಳು 
ವರ್ಷ ಧಾರೆಯಾಗಿ ಜಿನುಗಿ 
ವಸುದೆಯ ಮೈ ತೋಯ್ದು
ಹಸಿರ ಉಡಿಗೆ ತೊಡಿಸಿ
ಹೊಸ ಮದುವಣಗಿತ್ತಿಯಾಗಿಸಿ
ಕಾಮನಬಿಲ್ಲಿನ ಕಿರೀಟ ತೊಡಿಸಿ
ಅವಳ ಜೀವ ನಾಡಿಯಾಗಿ ಹರಿದವ್ನೆ ...
ಇತ್ತ ಮುಗಿಲ ಮರೆಯಲಿ 
ಇದ ಕಂಡು ಕಾಣದಂತೆ ರವಿಯು
ಇಣುಕು ನೋಟವ ಬೀರ್ತವ್ನೆ ... 
ರಾ.ಹೊ

ಶುಕ್ರವಾರ, ಜನವರಿ 11, 2013

ಅನುದಿನವು ಅರುಣೋದಯವಾಗಲಿ

ಮೋಹದ ಪರದೆಯ ಮುಸುಕ ಸರಿಸಿ
ಪ್ರೀತಿಯ ಪರವಶತೆಯಿಂದ ಹೊರ ಬಂದು
ಅವಲೋಕಿಸು ನನ್ನ ನೈಜತೆಯನ್ನ
ಇಜಾಡು ಪಾರದರ್ಶಕ ತಿಳಿಗೊಳದಲ್ಲಿ


ಮನಸಿನ ಮಾತ ಕೇಳು
ಕನಸಿಗೆ ಶೀರ್ಷಿಕೆ ಆಗು
ಜೀವ ಭಾವವ ಬೆಸೆಯು
ಒಲವ ಹೂ ಮಳೆ ಹರಿಸು

ನನ್ನ ಬಾಳ ಉಸಿರಾಗಿ
ನನ್ನೊಲುಮೆಯ ಮಾತ ಕೇಳಿ 
ನನ್ನೆದೆಯ ತಂಪು ಮಾಡು
ಈ ಜೀವಕೆ ಹೊಸ ಕಂಪ ಬೀರು


ಕಣ್ಣಿನ ಕನಸಿಗೆ ಬಣ್ಣವ ತುಂಬಿ 
ಅಮೃತದ ಹನಿಯ ಸವಿಯ ಉಣಿಸು
ಮಧುರಾನುಭೂತಿಗೆ ನಾಂದಿ ಹಾಡಿ
ಬೆಳಕಾಗಿಸು ಬಾ ಈ ಬಾಳ

ನಿನ್ನ ಸಾಮಿಪ್ಯದಲಿ ತುಟಿಗಳು
ಮಾತು ಹೊರಡದೆ ಸುಮ್ಮನಿರಲು
ನಿನ್ನ ಆ ಹೂ ಮುತ್ತ ಮನ ಬಯಸಿದೆ
ಒಮ್ಮೆ ಎತ್ತಿ ಬಿಗಿದಪ್ಪಿ ಮುದ್ದಾಡಲೇ?


ಆ ಮುದನೀಡುವ ನೆನಪುಗಳು
ಸದಾ ಕನಸಕಾಣುವ ಮನಸುಗಳು
ಒಲವ ಚಪ್ಪರದಲಿ ನಿನ್ನ ಪೂಜಿಸುತ
ಅನುದಿನವು ಅರುಣೋದಯವ  ಆಶಿಸುವೆ 
ರಾ.ಹೊ

ಭಾನುವಾರ, ಜನವರಿ 6, 2013

ಪ್ರೀತಿ ಚಿರಂತರ...


ಸ್ನೇಹದ ಮೊಗ್ಗಲಿ ಅನುರಾಗವು ಅರಳಿ ಪ್ರೀತಿಯ ಕಂಪ ಸೂಸಿ
ಗೆದ್ದಲು ಹಿಡಿದ ಮನಸನು ತಿಳಿಯಾಗಿಸಿತು
ಕಾರಣವಿಲ್ಲದೆ ಹುಟ್ಟುವ ಪ್ರೀತಿ ರೆಪ್ಪೆ ಮಿಡಕುವದರಲ್ಲಿ
ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ

ನಿನ್ನ ಸವಿ ಮಾತು ಸದಾ ಸಪ್ತ ಸ್ವರದಂತೆ
ನಿನ್ನ ಪ್ರತಿ ನಗುವಿನಲು ಚಂದಿರನ ಸಂಚಲನ
ನಿನ್ನ ನೀಲ ಕಂಗಳಲಿ ಅದೆಂತಾ ಮಿಂಚು
ನಿನ್ನ ಹಾವ ಭಾವದಲಿ ಅದೇನೋ ಸಡಗರ
ನಿನ್ನ ಮುಂದೆ ತೃಣ ಮಾತ್ರ ಸಿರಿ ಭೋಗ
ನಿನ್ನ ಕನಸನ್ನು ನನ್ನ ಕನಸಂತೆ ಕಾಣುವೆ
ನಿನ್ನ ಪ್ರತಿ ಹೆಜ್ಜೆಯಲ್ಲೂ ಒಲವ ಮಳೆ ತರುವೆ
ನಿನ್ನ ಸನಿಹವೇ ಸದಾ ಸುಂದರ ಸುಮಧುರ
ನಿನಗಾಗಿ ಹುಟ್ಟಿದ ಈ ಪ್ರೀತಿ ಚಿರಂತರ
ಇನ್ನೂ ಯಾಕೆ ಈ ವಿರಹದ ಅಂತರ...