ಸೋಮವಾರ, ಜೂನ್ 18, 2012

ಸಿರಿಮನೆ ಮತ್ತು ಮಗೆಬೈಲು ಜಲಪಾತ - ಕಿಗ್ಗಾ .

ಮಲೆನಾಡಿನ ಗಿರಿಕಂದರಗಳ ನಡುವೆ ತುಂಬಿ ಹರಿಯುವ ತೊರೆ-ಝರಿಗಳು, ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳು, ಮುಗಿಲಿಗೆ ತಾಗಲು ಒಂದಕ್ಕೊಂದು ಪೈಪೋತಿಯಲ್ಲಿರುವಂತ ಬೆಟ್ಟದ ಸಾಲುಗಳು ಎಂತಹವರನ್ನಾದರೂ ತನ್ನೆಡೆಗೆ ಆಕರ್ಷಿಸುತ್ತದೆ. ಆಹಾ..! ಇವುಗಳು ನೋಡಲು ಎಂತಹ ರಮ್ಯ ಆದರೆ ಹೆಚ್ಚಿನವು ಇನ್ನೂ ಗಮ್ಯ ಇಂತಹವುಗಳಲ್ಲಿ ಶ್ರಂಗೇರಿಯ ಬಳಿಯ 'ಕಿಗ್ಗಾ' ದಲ್ಲಿರುವ 'ಸಿರಿಮನೆ ಜಲಪಾತ' ಹಾಗು ಅವನತಿದೂರದಲ್ಲಿರುವ 'ಮಗೆಬೈಲು ಜಲಪಾತವು' ಸೇರಿವೆ.
ಮೊದಲು ಶ್ರಂಗೇರಿಯ ಶಾರದಾಂಬೆಯ ದರ್ಶನ ಮಾಡಿ ನಂತರ ಅಲ್ಲಿಂದ ೭ ಕಿಲೋ ಮೀಟರ ದೂರದ ಕಿಗ್ಗಾದ ಪ್ರಸಿದ್ದ ಮತ್ತು ಕಾರ್ಣಿಕವಾದ 'ಋಶ್ಯಶ್ರುಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿಂದ ಸಿರಿಮನೆ ಊರಿನ್ನತ್ತ ಪ್ರಯಾಣ ಆರಂಭಿಸಿದರೆ ಚೆನ್ನ. ಶ್ರಂಗೇರಿಯಿಂದ ಕಿಗ್ಗಾಗೆ ಗಂಟೆಗೊಂದರಂತೆ ಬಸ್ಸಿನ ವ್ಯವಸ್ತೆ ಇದ್ದು ಅಲ್ಲಿಂದ ಮುಂದಿನ ೫ ಕಿಲೋ ಮೀಟರ ಖಾಸಗಿ ವಾಹನದ ಅವಲಂಬನೆ ಅವಶ್ಯ. ಜಲಪಾತದ ಭೋರ್ಗರೆಯುವ ಶಬ್ದವು ಮೊದಲು ನಿಮ್ಮನ್ನು ಸ್ವಾಗತಿಸಿದರೆ ಆ ಹಂಸ ಬಿಳುಪಿನ ಜಲಪಾತವಂತೂ ಮೊದಲ ನೋಟದಲ್ಲೇ ಮಂತ್ರ ಮುಗ್ದವಾಗಿಸುವುದಂತೂ ಸತ್ಯ.

ಕೆಳಗೆ ಧುಮುಕುತ್ತಿರುವ ನೀರಿಗೆ ತಲೆಕೊಟ್ಟು ಸ್ನಾನ ಮಾಡಿದರೆ ಪ್ರಯಾಣದ ಸುಸ್ತೆಲ್ಲಾ ಮಾಯವಾಗಿ ಹೊಸ ಚೈತನ್ಯ ಸಿಗುತ್ತದೆ. ಮಕ್ಕಳಿಗಂತೂ ಬೇಸಿಗೆಯಲ್ಲಿ ತುಂತುರು ಹನಿಯಲ್ಲಿ ಆಟವಾಡುವುದೇ ಚೆಂದ. ಸಾಹಸೀ ಮನೋಭಾವದವರಿಗೆ ಅರ್ಧದವರೆಗೆ ಜಲಪಾತವನ್ನು ಹತ್ತಬಹುದು. ಆದರೆ ಬಂಡೆಗಳು ಜಾರುವುದರಿಂದ ಜಾಗ್ರತೆವಹಿಸುವುದು ಅತ್ಯವಶ್ಯ. ಮಳೆಗಾಲದ ಸಮಯದಲ್ಲಿ ಇದರ ಅಕ್ಕಪಕ್ಕದಲ್ಲಿ ಅನೇಕ ತೊರೆಗಳನ್ನು ಕಾಣಬಹುದು.

ಜಲಪಾತದ ಪಕ್ಕದಲ್ಲಿ ಊರವರೆಲ್ಲ ಸೇರಿ ನಿರ್ಮಿಸಿದ ಸಣ್ಣ ವಿಧ್ಯುತ್ ಘಟಕವಿದ್ದು ಇಲ್ಲಿ ಇಡೀ ಗ್ರಾಮಕ್ಕೆ ಸಾಕಾಗುವಷ್ಟು ವಿಧ್ಯುತ್ ಉತ್ಪತ್ತಿಯಾಗುತ್ತದೆ. ಸಿರಿಮನೆ ಜಲಪಾತದಿಂದ ಅನತಿ ದೂರದಲ್ಲಿ ಇನ್ನೊಂದು ಅಜ್ಞಾತ ಜಲಪಾತವು ಇದೆ. ಆದೆ ಮಗೆಬೈಲು ಜಲಪಾತ ಆದರೆ ಈ ದಿನಗಳಲ್ಲಿ ನಕ್ಸಲ್ ಕಾರಣದಿಂದ ಇದು ಪ್ರಚಾರಕ್ಕೆ ಬರದೆ ನಿಘೂಡವಾಗಿಯೇ ಉಳಿದಿದೆ.
ಸಿರಿಮನೆಯಿಂದ ೨ ಕಿಲೋ ಮೀಟರ ದೂರದಲ್ಲಿರುವ ಮಗೆಬೈಲು ಹಳ್ಳಿಯ ಭಟ್ಟರ ಮನೆಯ ಹಿಂದಿರುವ ಗುಡ್ಡದ ಕಾಲುದಾರಿಯಲ್ಲಿ ೩ ಕಿಲೋ ಮೀಟರ ನಡೆದರೆ ಒಮ್ಮೆಲೇ ಮಗೆಬೈಲು ಜಲಪಾತವು ಪ್ರತ್ಯಕ್ಷವಾಗುತ್ತವೆ. ಕೊನೆಯ ಒಂದು ಮೈಲು ಕಡಿದಾದ ಇಳಿಜಾರಿನ ಚಾರಣವು ಸ್ವಲ್ಪ ಕಷ್ಟವಾಗಿದ್ದು ಬೇಸಿಗೆಯ ಸಮಯಸಲ್ಲೂ ಈ ದಾರಿಯಲ್ಲಿ ರಕ್ತ ಹೀರುವ ಜಿಗಣೆಗಳ ಕಾಟ. ಇದೆಲ್ಲದರ ನಡುವೆ ಹೇಗೋ ಕಷ್ಟಪಟ್ಟು ಜಲಪಾತದ ಬುಡಕ್ಕೆ ತಲುಪಿದಾಗ, ಕಗ್ಗತ್ತಲ ಕಾರ್ಮೋಡದ ನಡುವೆ ಗೋಚರಿಸುವ ಮಿಂಚಿನ ಬಳ್ಳಿಯಂತೆ ಇದೆ ಈ ಅಜ್ಞಾತ ಜಲಪಾತ.

ಕಗ್ಗಾಡಿನಲ್ಲಿ ಸುತ್ತಲೂ ಬ್ರಹದ್ದಾಕಾರದ ಬಂಡೆಯಿಂದಾವ್ರತವಾದ ಭಯಾನಕತೆಯನ್ನು ನೆನಪಿಸುವಂತ ಅಭೂತಪೂರ್ಣವಾದ ಸ್ನಿಗ್ಧ ಸೊಂದರ್ಯದ ಖನಿ ಇದಾಗಿದೆ. ಹತ್ತು ಅಡಿ ಎತ್ತರದ ಬಂಡೆಗಳ ರಾಶಿಯನ್ನು ಕಷ್ಟಪಟ್ಟು ಸುತ್ತಿ ಬಳಸಿ ಹತ್ತಿದರೆ ಮಾತ್ರ ಜಲಪಾತದ ಬುಡ ತಲುಪಲು ಸಾಧ್ಯ. ಸುಮಾರು ೭೦ ಅಡಿ ಎತ್ತರದ ಬಂಡೆಯಿಂದ ವೋಮ್ಮೆಲೇ ಕೆಳಗೆ ಧುಮುಕುವ ಜಲಪಾತ ಇದಾಗಿದ್ದು ಇದರ ತಂಪಾದ ಶುಬ್ರ ನೀರಿನ ಕೊಳದಲ್ಲಿ ದೇಹವನ್ನು ಬಿಟ್ಟು ಪ್ರಕ್ರತಿಯ ನಿಘೂಡತೆಯನ್ನು ಸವಿಯುವುದೇ ಎಷ್ಟು ಚೆನ್ನ. ನಡು ಮಧ್ಯಾನದಲ್ಲೂ ಸೂರ್ಯನ ಬೆಳಕು ಕಾಣದ ಈ ಜಾಗವು ಎಂತಹವರನ್ನಾದರೂ ನಿಬ್ಬೆರಾಗಿಸುವುದು ಸತ್ಯ. ರಜೆಯ ಮೋಜನ್ನು ಪ್ರಕ್ರತಿಯ ಮಡಿಲಲ್ಲಿ ಅನುಭವಿಸಲು ಇಲಿಗೊಮ್ಮೆ ಚಾರಣಗ್ಯೆಯಲು ಇದು ಸೂಕ್ತ ಸ್ಥಳ.
(ರಾ.ಹೊ.)

2 ಕಾಮೆಂಟ್‌ಗಳು: