ಶನಿವಾರ, ಡಿಸೆಂಬರ್ 29, 2012

ಮನಸಿನ ಮಿಡಿತ ಸುಳ್ಳಾಗಲಿಲ್ಲ...

ಮೊದಲ ಪ್ರೀತಿಯ ಅನುಭೂತಿಯು
ಮುಂಜಾನೆಯ ಮುತ್ತಿನ ಹನಿಯಾದರೆ
ಇನ್ನೊಮ್ಮೆ ಚಿಮ್ಮಿದ ಅನುರಾಗದ
ವರ್ಷ ಧಾರೆಯ ಪುಟ್ಟ ಹನಿಯು
ಶುದ್ಧ ಧವಳತೆಯ ಮುತ್ತಾಯಿತು
ಮನಸಿನ ಚಿಪ್ಪಿನಲ್ಲಿ ಶಾಶ್ವತವಾಯಿತು

ಊಹಿಸದೇ ಮನಸ್ಸನ್ನು ಹೊಕ್ಕು ಕಚಗುಳಿಯಿಟ್ಟು
ಹೃದಯವನ್ನು ಹೂವಾಯಿಸಿ
ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸಿ
ಬೆಂದು ಬಸವಳಿದ ಬಾಳ ಸಂಪನ್ನಗೊಳಿಸಿ
ಬದುಕು ಮುಗಿಯುವವರೆಗೂ ಪ್ರೀತಿಯು 
ಕಿಂಚಿತ್ತೂ ಕಡಮೆಯಾಗದಂತೆ ಆರಾಧಿಸುವ

ಅದು ಚೈತ್ರ ತಂದ ಚಿಗುರಂತೆ
ಚೆಂದುಟಿಯ ಮೇಲೆ ನಳನಳಿಸುವ ಹೂನಗೆಯಂತೆ
ಕರ್ಣಾನಂದಕರವಾದ ಮಧುವಂತಿ ರಾಗದಂತೆ 
ಅತಿ ನವ್ಯ ರಸ ಗಾಯನದ ಅಲೆಯಲ್ಲಿ ತೇಲಿಸಿ 
ಹೃದಯಂತರಾಳದೊಳಕ್ಕೆ ಬಂದು ಸೇರಿತು
ಕಾಲ ಕಾಲವಾಗುವವರೆಗೆ..

ಆ ನಿನ್ನ ಸವಿಯಾದ ಸ್ನೇಹಲತೆ
ಏನ್ನನೋ ಹೇಳ ಬಯಸುವ ಕಂಗಳು
ಇರುಳನ್ನೇ ನಾಚಿಸುವಂಥ ಮುಂಗುರುಳು
ನಿತಂಬದವರೆಗಿನ ಜಾರಿದ ನವಿರಾದ ಜಡೆ
ಮನಸ್ಸನ್ನು ಕಲಕಿ ಮಧುರ ಭಾವದಲೆ ಎಬ್ಬಿಸಿ
ಸುಂದರ ಬಾಳ ಪ್ರಯಾಣಕೆ ಸುಪ್ಪತ್ತಿಗೆಯಾಯಿತು

ನೀ ಬದುಕನ್ನು ಇಷ್ಟ ಪಡುವ ರೀತಿಯಲಿ
ಆ ನಿನ್ನ ಹಾಲಿನ ಮನಸ್ಸಿನ ಆಸೆ ಆಕಾಂಕ್ಷೆಗಳ
ಸಾಕಾರಗೊಳಿಸಲು, ಸರಳತೆಯ ಮಾನದಂಡದಲಿ
ಭವಿಷ್ಯದ ಕನಸಿನ ಮಾಲೆಯನ್ನು ಬದಲಿಸಿ
ಬದುಕಿನ ನೀರವತೆಯನ್ನು ಕಳೆದು
ಯಶಸ್ಸಿನ ಸುಂದರ ಬಾಳು ಕಟ್ಟೋಣ
(ರಾ.ಹೊ.)

ಗುರುವಾರ, ಸೆಪ್ಟೆಂಬರ್ 13, 2012

ಹೊಂಬೆಳಕ ಆಶಿಸೋಣ

ಹುಟ್ಟುವಾಗ ಅಳುವಿಂದ ಆರಂಭಿಸುವ ನಾವು
ಜನುಮ ಪೂರ್ತಿ ನಗುವನ್ನೇ ಬಯಸುವೆವು
ಹಣದ ಮೋಹದ ಮುಂದೆ
ಪ್ರೀತಿ ಸಂಭಂದಗಳು ಮಂಕಾಗುವುದೇಕೆ

ಜಾತಿ ಧರ್ಮ ಮೇಲು-ಕೀಳೆಂಬ ಅಂತರವ ಹುಟ್ಟುಹಾಕಿ
ಮಾನವತೆಯನ್ನು ಮರೆಯುವತ್ತ ಸಾಗಿದೆವೇಕೆ ಪಯಣ
ಯೋಗ ಧ್ಯಾನವ ಮೀರಿ ಸತ್ಯ ದೇವತೆಯ ಮರೆತು
ಭೋಗ ಕಾಮನೆ ಪಡೆಯುವತ್ತ  ಚಿತ್ತ ವಾಲುವುದೇಕೆ

ಹುಟ್ಟು-ಸಾವು ಸಹಜದಂತೆ ಸೋಲು ಗೆಲವು ಸಾಮಾನ್ಯ
ಸಂತಾಪ ಸಮಾಧಾನಕ್ಕಿಂತ  ಪ್ರೋತ್ಸಾಹದ ಕಂಪ ಸೂಸು
ಭರವಸೆಯು ಭರಚುಕ್ಕಿಯಾಗಿ ಬಾಳ ಬೆಳಕಾಗಿ
ಸೋದರ ಸಮಾನತೆಯ ಸೊಂಪು ಹಾಕು

ಕನಸು ಎಂದಾದರು ಕಪ್ಪು-ಬಿಳುಪು ಅಗುವುದುಂಟೆ
ಆಶಿಸೋಣ ಜೀವನ ಕಾಮನಬಿಲ್ಲಿನ ಚಿತ್ತಾರ
ಆಸೆ ಅಸೂಯೆಯ ಅರಗಿಸಿ
ಸ್ನೇಹದ ಕದಂಬ ಬಾಹುವನ್ನು ಎಲ್ಲೆಡೆ ಚಾಚೋಣ
(ರಾ.ಹೊ.)

ಗುರುವಾರ, ಆಗಸ್ಟ್ 30, 2012

ಸೋಜಿಗದ ತಾಣ ಕರಿಕಾನಮ್ಮನ ಬೆಟ್ಟ

ಹೊನ್ನಾವರದ ಸುಂದರ ರಮಣೀಯ ಸ್ಥಳಗಳಲ್ಲಿ ಪಶ್ಚಿಮ ಘಟ್ಟದ ಮಡಿಲಲ್ಲಿರುವ ಕರಿಕಾನ ಅಮ್ಮನವರ ಬೆಟ್ಟವೂ ಒಂದು. ಜಾಸ್ತಿ ಪ್ರಚಾರವಿಲ್ಲದೆ ಕರಿ ಕಾನನದ ಸ್ವಚ್ಹ ಒಡಲಲ್ಲಿರುವ ಈ ದೇಗುಲವು ಆಸ್ತಿಕ ಮತ್ತು ನಾಸ್ತಿಕ ಎರಡೂ ವರ್ಗದವರು ಭೇಟಿ ಕೊಡಬೇಕಾದಂತ ಜಾಗವಿದು. ಹೊನ್ನಾವರದಿಂದ ಅರೆಅಂಗಡಿ ಮುಖಾಂತರ 8  ಕಿಲೋ ಮೀಟರ್ ಚಲಿಸಿದರೆ ಅಲ್ಲಿ ದೇವಸ್ತಾನದ ಕಮಾನು ನಿಮ್ಮನ್ನು ಸ್ವಾಗತಿಸುತ್ತದೆ. ಮುಂದೆ ಬೆಟ್ಟದ ಕಡಿದಾದ ಹಾದಿಯಲ್ಲಿ ಕಗ್ಗಾಡಿನ ನಡುವೆ 4 ಕಿಲೋ ಮೀಟರ್ ಸಂಚಾರಿಸುತ್ತ ದೇಗುಲವ ಕ್ರಮಿಸುದೇ ಒಂದು ಸುಂದರ ಅನುಭೂತಿ.

ಸಾಧು ಶ್ರೀಧರ ಸ್ವಾಮಿಯವರು ಈ ಸುಂದರ ಪರಿಸರದಲ್ಲಿ ದೈವಿಕತೆಯ ನೆಲೆಯನ್ನು ಗುರುತಿಸಿ ೧೮ನೇ ದಶಕದಲ್ಲಿ  ಕರಿಕಾನ ಬೆಟ್ಟದ ತುದಿಯ ಸಮೀಪ ದೇವಿಯ ದೇವಸ್ತಾನವನ್ನು ನಿರ್ಮಿಸಿದರು ಎನ್ನಲಾಗಿದೆ. ಮೊದಲಿನಿಂದಲೂ ಈ ಸಾನಿಧ್ಯದಲ್ಲಿ ಸ್ವಚ್ಛತೆಗೆ ಮೊದಲ ಪ್ರಾಶಸ್ತ್ಯ ಕೊಡುತ್ತ ಬಂದಿದ್ದು ಸ್ವಲ್ಪ ಏನಾದರು ಹೆಚ್ಚುಕಡಿಮೆಯಾದಲ್ಲಿ ಹುಲಿಯು ದೇವಸ್ತಾನಕ್ಕೆ ಬರುತ್ತವೆ ಎಂಬ ಪ್ರತೀತಿ ಇದೆ.  ಈಗಲೂ ಆಸ್ತಿಕ ಭಾಂದವರು ಮತ್ತು ಬೆಟ್ಟದ ತಪ್ಪದ ಗ್ರಾಮದಲ್ಲಿರುವ ಗ್ರಾಮಸ್ತರು ಭೇಟಿ ನೀಡುವುದರೊಂದಿಗೆ ಆ ತಾಯಿಯ ಆಶೀರ್ವಾದ ಪಡೆಯುವುದರೊಂದಿಗೆ ಆ ಸುಂದರ ಪರಿಸರದಲ್ಲಿ ಸಂತಸವ ಮನಕಾಣುತ್ತಿದ್ದಾರೆ . ಇಲ್ಲಿಂದ ಕೆಲವು ಮೈಲುಗಲ ಅಂತರದಲಿ ಒಂದಡಿಕೆ ಎಂಬ ಶಿವನ ಕ್ಷೇತ್ರವಿದ್ದು ಇಲ್ಲಿ ಸೋಜಿಗವೆಂಬಂತೆ ಒಂದು ಅಡಿಕೆ ಮರವಿದ್ದು ಅದರಲಿ ಒಂದೇ ಅಡಿಕೆ ಕಾಯಿ ಆಗುತ್ತದೆ ಎನ್ನಲಾಗುತ್ತದೆ.

ಅರ್ಚಕ ಕುಟುಂಬವೊಂದು ದೇವಿಯ ಪೂಜಾ ಕೈಖರ್ಯವನ್ನು ಕ್ರಮಬದ್ಧವಾಗಿ ನೋಡಿಕೊಳ್ಳುತ್ತಿದ್ದು ಕೆಲವು ವಿಶೇಷ ದಿನಗಳಲ್ಲಿ ಸಮಸ್ತ ಭಕ್ತ ಭಾಂದವರ ಸಮ್ಮುಖದಲ್ಲಿ ಭಾರಿ ವಿಜ್ರಂಬನೆಯಿಂದ ವಿವಿಧ ಧರ್ಮಿಕಾಚರಣೆಗಳು ನಡೆಯುತ್ತಾ ಬಂದಿರುತ್ತದೆ. ದೇಗುಲದ ಸಾನಿಧ್ಯದಲ್ಲಿ ತಂಗಲು ತಕ್ಕಮಟ್ಟಿನ ವ್ಯವಸ್ತೆಯಿದ್ದು, ಮೊದಲೇ ಹೇಳಿದಲ್ಲಿ ಅರ್ಚಕರು ಫಲಾಹಾರದ ವ್ಯವಸ್ತೆ ಮಾಡುತ್ತಾರೆ.

ಮುಂಗಾರಿನ ಮುಂಜಾನೆಯ ಮಂಜಿನಲಿ ಚಿಲಿ-ಪಿಲಿ ಹಕ್ಕಿಯ ನಿನಾನದ ನಡುವೆ ವಾಹನದ ಪ್ರಯಾಣದ ಬದಲು ನಡಿಗೆಯ ನಡಿಗೆಯ ಮೂಲಕ ಬೆಟ್ಟಕೆ ಚಾರಣ ಮಾಡುವುದೇ ಒಂದು ಚೆಂದ. ದೂರದ ಅರಬ್ಬೀ ಸುಮದ್ರದಲ್ಲಿನ ಸೂರ್ಯಾಸ್ತದ ಸಡಗರವ ಸವಿಯುತ್ತ ಸಂಜೆಯ ತಂಗಾಳಿಯನು ಅನುಭವಿಸುವುತ್ತ ಆ ದಿವ್ಯ ಸಾನಿಧ್ಯದಲ್ಲಿ ಕೂತರೆ ಎಂತವರನ್ನೂ ಮಂತ್ರಮುಗ್ಧನಾಗಿರಿಸುವುದರಲ್ಲಿ ಅನುಮಾನವಿಲ್ಲ.ಮೋಡಗಳ ಸುಂದರ ಕಣ್ಣುಮುಚ್ಚಾಲೆ ಆಟವ ನೋಡಲು ಮಳೆಗಾಲದಲ್ಲಿ ಭೇಟಿ ನೀಡುವುದು ಒಳಿತು.

ನಿಮ್ಮ ಕರಿಕಾನ ಬೆಟ್ಟದ ಭೇಟಿಯ ಜೊತೆಗೆ ರಾಮತೀರ್ಥ, ಅಪ್ಸರಕೊಂಡ, ಧಾರೇಶ್ವರ ಮುಂತಾದ ಸುತ್ತಮುತ್ತಲಿನ ರಮಣೀಯ ಜಾಗಕ್ಕೂ ಭೇಟಿ ಕೊಡಬಹುದು.
(ರಾ.ಹೊ.)

ಸೋಮವಾರ, ಜುಲೈ 2, 2012

ಮಳೆಗಾಲವು ಮುದ ನೀಡಲಿ ನಿಮಗೆ...

ಪಡುವಣದಿ ಬರುತಿದೆ ಕಾರ್ಮೋಡಗಳು
ಆಗಸದಲಿ ಕರಿ ಮೋಡದ್ದೇ ಬಹು ಪಾಲು
ಶುರುವಾಯಿತು ವರುಣನ ದರ್ಬಾರು
ಇದಕೆ ಹಾಂತೆಗಳ ನರ್ತನದ ಮೇರು

ಮಳೆ ಬಂದರೆ ನಮ್ಮೂರ ವೈಧ್ಯರಿಗೆ ಹಣದ ಕೊಯ್ಲೇ ಕೊಯ್ಲು
ಎಲ್ಲೆಂದರಲಿ ಬಣ್ಣ ಬಣ್ಣದ ಕೊಡೆಗಳದ್ದೆ ಕಾರು-ಬಾರು
ಆಟಿಯೆಂದರೆ ನಮ್ಮೊರ ಭಟ್ಟರಿಗೆ ಬರೀ ಬೋರು
ಅದುವೇ ಬೀದಿ ನಾಯಿಗಳಿಗೆ ಸ್ವರ್ಗಕ್ಕೆ ಮೂರೇ ಗೇಣು

ನಗರದಲ್ಲೋ ಟ್ರಾಫಿಕ್ ಜ್ಯಾಮೋ -ಜ್ಯಾಮ್
ಎಡೆಯಿಲ್ಲದೆ ಅಪಘಾತಗಳು ಸಾಲು ಸಾಲು
ರೋಡಿನಲಿ ಚರಂಡಿಯ ನೀರು ರಾಡಿ ಮಾಡಿ
ಜನ-ಜೀವನವು ಒಂದೇ ಮಳೆಯಲಿ  ಬುಡಮೇಲು

ಸಮುದ್ರ ರಾಜನ ಕೊನೆಯಿಲ್ಲದ ಘನ ಘೋರ ಶಂಖ ನಾದ
ತೋಟದಲ್ಲಿ ಗೊಂಕ್ರಕಪ್ಪೆಗಳ ಮೇಳ ಕೊಯ್ಯಂ ಕೊಟ್ರಂ
ಅಂಗಳದ ಕೊನೆಯಲ್ಲಿನ ಕೊಳೆಯಲ್ಲಿ ಟಿಸಿಲೊಡೆದ ಕಳೆ
ಕಂಬಳಿಯ ಕವಚ ತೊಟ್ಟು ನೇಗಿಲೆತ್ತಿ ಹೊರಟ ರೈತ

ಆಗಸದಲಿ ಕರಿ ಮೋಡದ್ದೇ ಬಹು ಪಾಲು
ಶುರುವಾಯಿತು ವರುಣನ ದರ್ಬಾರು
(ರಾ.ಹೊ.)

ಸೋಮವಾರ, ಜೂನ್ 18, 2012

ವೇದಾಂತಿ

ಕಲ್ಲು ಸಕ್ಕರೆಯಾದೆ ಕಾದ ಕಬ್ಬಿಣವಾದೆ
ಜೇನ ಸವಿಯ ಸವಿದೆ ಹೆಜ್ಜೇನು ಆಗಿ ಕಡಿದೆ
ಸುಂದರ ಸಂತಸದ ಮನವು ಸತ್ತ ಸೂತಕದ ಮನೆಯು
ನನ್ನ ನಾಲಗೆಯ ನಾ ಕಚ್ಚಿ ಕೊಂಡೆ
ಹೃದಯದ ಕವಾಟದ ಕೀ ಕಳೆದುಕೊಂಡೆ
ಅಂದು ಮನಸಿನ ಪಾಠಶಾಲೆಯಲಿ ಕೊಟ್ಟ
ಆ ಸವಿ ಮುತ್ತುಗಳ ಮತ್ತು ಸ್ಪೂರ್ತಿ ಆಯಿತಲ್ಲ
ಇಂದು ಎನಗೆ ವೇದಾಂತಿಯಾಗಲು...
(ರಾ.ಹೊ.)

ಸಿರಿಮನೆ ಮತ್ತು ಮಗೆಬೈಲು ಜಲಪಾತ - ಕಿಗ್ಗಾ .

ಮಲೆನಾಡಿನ ಗಿರಿಕಂದರಗಳ ನಡುವೆ ತುಂಬಿ ಹರಿಯುವ ತೊರೆ-ಝರಿಗಳು, ಭೋರ್ಗರೆದು ಧುಮ್ಮಿಕ್ಕುವ ಜಲಪಾತಗಳು, ಮುಗಿಲಿಗೆ ತಾಗಲು ಒಂದಕ್ಕೊಂದು ಪೈಪೋತಿಯಲ್ಲಿರುವಂತ ಬೆಟ್ಟದ ಸಾಲುಗಳು ಎಂತಹವರನ್ನಾದರೂ ತನ್ನೆಡೆಗೆ ಆಕರ್ಷಿಸುತ್ತದೆ. ಆಹಾ..! ಇವುಗಳು ನೋಡಲು ಎಂತಹ ರಮ್ಯ ಆದರೆ ಹೆಚ್ಚಿನವು ಇನ್ನೂ ಗಮ್ಯ ಇಂತಹವುಗಳಲ್ಲಿ ಶ್ರಂಗೇರಿಯ ಬಳಿಯ 'ಕಿಗ್ಗಾ' ದಲ್ಲಿರುವ 'ಸಿರಿಮನೆ ಜಲಪಾತ' ಹಾಗು ಅವನತಿದೂರದಲ್ಲಿರುವ 'ಮಗೆಬೈಲು ಜಲಪಾತವು' ಸೇರಿವೆ.
ಮೊದಲು ಶ್ರಂಗೇರಿಯ ಶಾರದಾಂಬೆಯ ದರ್ಶನ ಮಾಡಿ ನಂತರ ಅಲ್ಲಿಂದ ೭ ಕಿಲೋ ಮೀಟರ ದೂರದ ಕಿಗ್ಗಾದ ಪ್ರಸಿದ್ದ ಮತ್ತು ಕಾರ್ಣಿಕವಾದ 'ಋಶ್ಯಶ್ರುಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿಂದ ಸಿರಿಮನೆ ಊರಿನ್ನತ್ತ ಪ್ರಯಾಣ ಆರಂಭಿಸಿದರೆ ಚೆನ್ನ. ಶ್ರಂಗೇರಿಯಿಂದ ಕಿಗ್ಗಾಗೆ ಗಂಟೆಗೊಂದರಂತೆ ಬಸ್ಸಿನ ವ್ಯವಸ್ತೆ ಇದ್ದು ಅಲ್ಲಿಂದ ಮುಂದಿನ ೫ ಕಿಲೋ ಮೀಟರ ಖಾಸಗಿ ವಾಹನದ ಅವಲಂಬನೆ ಅವಶ್ಯ. ಜಲಪಾತದ ಭೋರ್ಗರೆಯುವ ಶಬ್ದವು ಮೊದಲು ನಿಮ್ಮನ್ನು ಸ್ವಾಗತಿಸಿದರೆ ಆ ಹಂಸ ಬಿಳುಪಿನ ಜಲಪಾತವಂತೂ ಮೊದಲ ನೋಟದಲ್ಲೇ ಮಂತ್ರ ಮುಗ್ದವಾಗಿಸುವುದಂತೂ ಸತ್ಯ.

ಕೆಳಗೆ ಧುಮುಕುತ್ತಿರುವ ನೀರಿಗೆ ತಲೆಕೊಟ್ಟು ಸ್ನಾನ ಮಾಡಿದರೆ ಪ್ರಯಾಣದ ಸುಸ್ತೆಲ್ಲಾ ಮಾಯವಾಗಿ ಹೊಸ ಚೈತನ್ಯ ಸಿಗುತ್ತದೆ. ಮಕ್ಕಳಿಗಂತೂ ಬೇಸಿಗೆಯಲ್ಲಿ ತುಂತುರು ಹನಿಯಲ್ಲಿ ಆಟವಾಡುವುದೇ ಚೆಂದ. ಸಾಹಸೀ ಮನೋಭಾವದವರಿಗೆ ಅರ್ಧದವರೆಗೆ ಜಲಪಾತವನ್ನು ಹತ್ತಬಹುದು. ಆದರೆ ಬಂಡೆಗಳು ಜಾರುವುದರಿಂದ ಜಾಗ್ರತೆವಹಿಸುವುದು ಅತ್ಯವಶ್ಯ. ಮಳೆಗಾಲದ ಸಮಯದಲ್ಲಿ ಇದರ ಅಕ್ಕಪಕ್ಕದಲ್ಲಿ ಅನೇಕ ತೊರೆಗಳನ್ನು ಕಾಣಬಹುದು.

ಜಲಪಾತದ ಪಕ್ಕದಲ್ಲಿ ಊರವರೆಲ್ಲ ಸೇರಿ ನಿರ್ಮಿಸಿದ ಸಣ್ಣ ವಿಧ್ಯುತ್ ಘಟಕವಿದ್ದು ಇಲ್ಲಿ ಇಡೀ ಗ್ರಾಮಕ್ಕೆ ಸಾಕಾಗುವಷ್ಟು ವಿಧ್ಯುತ್ ಉತ್ಪತ್ತಿಯಾಗುತ್ತದೆ. ಸಿರಿಮನೆ ಜಲಪಾತದಿಂದ ಅನತಿ ದೂರದಲ್ಲಿ ಇನ್ನೊಂದು ಅಜ್ಞಾತ ಜಲಪಾತವು ಇದೆ. ಆದೆ ಮಗೆಬೈಲು ಜಲಪಾತ ಆದರೆ ಈ ದಿನಗಳಲ್ಲಿ ನಕ್ಸಲ್ ಕಾರಣದಿಂದ ಇದು ಪ್ರಚಾರಕ್ಕೆ ಬರದೆ ನಿಘೂಡವಾಗಿಯೇ ಉಳಿದಿದೆ.
ಸಿರಿಮನೆಯಿಂದ ೨ ಕಿಲೋ ಮೀಟರ ದೂರದಲ್ಲಿರುವ ಮಗೆಬೈಲು ಹಳ್ಳಿಯ ಭಟ್ಟರ ಮನೆಯ ಹಿಂದಿರುವ ಗುಡ್ಡದ ಕಾಲುದಾರಿಯಲ್ಲಿ ೩ ಕಿಲೋ ಮೀಟರ ನಡೆದರೆ ಒಮ್ಮೆಲೇ ಮಗೆಬೈಲು ಜಲಪಾತವು ಪ್ರತ್ಯಕ್ಷವಾಗುತ್ತವೆ. ಕೊನೆಯ ಒಂದು ಮೈಲು ಕಡಿದಾದ ಇಳಿಜಾರಿನ ಚಾರಣವು ಸ್ವಲ್ಪ ಕಷ್ಟವಾಗಿದ್ದು ಬೇಸಿಗೆಯ ಸಮಯಸಲ್ಲೂ ಈ ದಾರಿಯಲ್ಲಿ ರಕ್ತ ಹೀರುವ ಜಿಗಣೆಗಳ ಕಾಟ. ಇದೆಲ್ಲದರ ನಡುವೆ ಹೇಗೋ ಕಷ್ಟಪಟ್ಟು ಜಲಪಾತದ ಬುಡಕ್ಕೆ ತಲುಪಿದಾಗ, ಕಗ್ಗತ್ತಲ ಕಾರ್ಮೋಡದ ನಡುವೆ ಗೋಚರಿಸುವ ಮಿಂಚಿನ ಬಳ್ಳಿಯಂತೆ ಇದೆ ಈ ಅಜ್ಞಾತ ಜಲಪಾತ.

ಕಗ್ಗಾಡಿನಲ್ಲಿ ಸುತ್ತಲೂ ಬ್ರಹದ್ದಾಕಾರದ ಬಂಡೆಯಿಂದಾವ್ರತವಾದ ಭಯಾನಕತೆಯನ್ನು ನೆನಪಿಸುವಂತ ಅಭೂತಪೂರ್ಣವಾದ ಸ್ನಿಗ್ಧ ಸೊಂದರ್ಯದ ಖನಿ ಇದಾಗಿದೆ. ಹತ್ತು ಅಡಿ ಎತ್ತರದ ಬಂಡೆಗಳ ರಾಶಿಯನ್ನು ಕಷ್ಟಪಟ್ಟು ಸುತ್ತಿ ಬಳಸಿ ಹತ್ತಿದರೆ ಮಾತ್ರ ಜಲಪಾತದ ಬುಡ ತಲುಪಲು ಸಾಧ್ಯ. ಸುಮಾರು ೭೦ ಅಡಿ ಎತ್ತರದ ಬಂಡೆಯಿಂದ ವೋಮ್ಮೆಲೇ ಕೆಳಗೆ ಧುಮುಕುವ ಜಲಪಾತ ಇದಾಗಿದ್ದು ಇದರ ತಂಪಾದ ಶುಬ್ರ ನೀರಿನ ಕೊಳದಲ್ಲಿ ದೇಹವನ್ನು ಬಿಟ್ಟು ಪ್ರಕ್ರತಿಯ ನಿಘೂಡತೆಯನ್ನು ಸವಿಯುವುದೇ ಎಷ್ಟು ಚೆನ್ನ. ನಡು ಮಧ್ಯಾನದಲ್ಲೂ ಸೂರ್ಯನ ಬೆಳಕು ಕಾಣದ ಈ ಜಾಗವು ಎಂತಹವರನ್ನಾದರೂ ನಿಬ್ಬೆರಾಗಿಸುವುದು ಸತ್ಯ. ರಜೆಯ ಮೋಜನ್ನು ಪ್ರಕ್ರತಿಯ ಮಡಿಲಲ್ಲಿ ಅನುಭವಿಸಲು ಇಲಿಗೊಮ್ಮೆ ಚಾರಣಗ್ಯೆಯಲು ಇದು ಸೂಕ್ತ ಸ್ಥಳ.
(ರಾ.ಹೊ.)

ಸೋಮವಾರ, ಜೂನ್ 11, 2012

ಮಳೆಯಲಿ ಮಲೆಮನೆಯಲಿ...

ಈ ಬಿರು ಬೇಸಿಗೆಯಲಿ ಆ ಮಲೆಮನೆಯ ಮಡಿಲಲ್ಲಿ ಕಳೆದ ಸವಿ ನೆನಪನ್ನು ಮೆಲಕು ಹಾಕಿಕೊಳ್ಳುವುದೇ ಏನೋ ರೋಮಾಂಚನ...!!! ಮೊದಲ ಭೇಟಿಯಲ್ಲಿ ಜಲಪಾತದ ಎರಡನೆಯ ಹಂತದಲ್ಲೇ ಮುಕ್ತಾಯ ಮಾಡಿದ ಆ ಅಪೂರ್ಣತೆಯ ಅಳಿಸಲು ಕಳೆದ ಆಗಸ್ಟ್  ನಲ್ಲಿ ನಾನು ಮತ್ತು ನನ್ನಿಬ್ಬರು ಗೆಳೆಯರೊಂದಿಗೆ ಹೊನ್ನಾವರದತ್ತ ನಮ್ಮ ಪಯಣ. ಮುಂಜಾನೆಯಲಿ ಮೊದಲ ಬಸ್ಸನ್ನು ಹಿಡಿದು ಗೇರುಸೊಪ್ಪ ತಲುಪಿದ ನಾವು ಅಲ್ಲಿ ಕಾರ್ಣಿಕ ವೀರಾಂಜನೇಯನ ಅನುಗ್ರಹ ಪಡೆದು ಮುಂದಿನ ೫ ಮೈಲನು ಖಾಸಗೀ ವಾಹನದ ಮೂಲಕ ತಲುಪಿ ಹೊಸ ಅನ್ವೇಷಣೆಯ ಚಾರಣಕ್ಕೆ ಅಣಿಯಾದೆವು.
ಜಲಪಾತದ ಎರಡನೆಯ ಹಂತದವರೆಗೆ  ಅರಣ್ಯ ಇಲಾಖೆಯವರು ಮಾಡಿದ ಕಚ್ಚಾ ದಾರಿಯಿದ್ದು  ವಿರಳ ಜನ ಸಂಚಾರದಿಂದ ಗಿಡ-ಬಳ್ಳಿಗಳು ಎಲ್ಲಡೆ ಅವ್ರತವಾಗಿರುವುದರಿಂದ ನಾವು ಜಲಪಾತದ ಮೊದಲ ಹಂತದವರೆಗೆ ಮಳೆಗಾಲವನ್ನು ಹೊರತು ಪಡಿಸಿದರೆ ಸುಲಭವಾಗಿ ತಲುಪಬಹುದು. ನಾವು ಒಂದು ಸಣ್ಣ ತೊರೆಯ ದಾಟಿದ ನಂತರ ಕೆಲದಿಕ್ಕಿನಲಿ ಹರಿಯುತ್ತಿರುವ ಹಳ್ಳವ ಹಿಂಬಾಲಿಸಲಾರಂಭಿಸಿದೆವು. ೧೫ ನಿಮಿಷದ ಚಾರಣದ ನಂತರ ಜಲಪಾತದ ಮೊದಲ ಹಂತದ ಬುಡವನ್ನು ತಲುಪಿದೆವು.

ಜಲಪಾತದ ಎರಡನೆಯ ಹಂತವು ೫೦ ಅಡಿ ಎತ್ತರವಿದ್ದರೆ, ದೂರದ ಬೆಟ್ಟದ ಹಸಿರಿನ ಸಾಲಿನ ಮಧ್ಯ ಬಿಳಿಯ ಮಂದಾರ ಕುಸುಮದಂತೆ ಗೋಚರಿಸುವ ಮೊದಲನೇ ಹಂತವು ೩೦೦ ಅಡಿ ಎತ್ತರದಿಂತ ಮಲೆಮನೆ ಬೆಟ್ಟದ ಒಂದು ಮಗ್ಗಲಿನಿಂದ ನೇರವಾಗಿ ಕೆಳಗೆ ಧುಮುಕುತ್ತಿರುವಂತಿದೆ. ಕೆಲವು ನಿಮಿಷಗಳವರೆಗೆ ಹಾಗೆ ಮನೋಹರವಾದ ಜಲಪಾತವ ಪೂರ್ಣ ರೂಪವನ್ನು ನೋಡುತ್ತಾ ನಮ್ಮ ಮುಂದಿನ ನಡೆಯ ಬಗ್ಗೆ ಯೋಚಿಸಲಾರಂಭಿಸಿದೆವು.
ಜಲಪಾತದ ಮೊದಲ ಹಂತಕ್ಕೆ ಯಾವುದೇ ಹಾದಿ ಇಲ್ಲದಿರುವುದರಿಂದ ನಮ್ಮದೇ ಲೆಕ್ಕಾಚಾರದಲ್ಲಿ ಭಯಾನಕ ಕಾನನದ ನಡುವೆ ಏಳು-ಬೀಳುಗಳೊಂದಿಗೆ ಹುಚ್ಚು ಧೈರ್ಯ ಮತ್ತು ಹುಂಬ ಛಲದಿಂದ ರಕ್ತ ಹೀರುವ ಇಂಬುಳ
 (ಜಿಗಣೆ) ಗಳನ್ನೂ ಲೆಕ್ಕಿಸದೆ ಮೊದಲನೇ ಹಂತದ ಹತ್ತಿರ ತಲುಪಲು ಸಫಲಾರಾದೆವು. ಆದರೆ ಅಲ್ಲಿ ನೋಡಿದ್ದೇ ಬೇರೆ...!

ಇಲ್ಲಿ ಜಲಪಾತವು ಮೂರು ಹಂತದಲ್ಲಿ ವಿಶಾಲ ಬಂಡೆಯ ಕೋಟೆಯ ನಡುವೆ ಧುಮುಕುತ್ತಿದ್ದು ನಮ್ಮ ಮುಂದಿನ ಹಾದಿ ಕಠಿಣವಾಗಿತ್ತು. ಕಡಿದಾದ ಜಾರುವ ಬಂಡೆಗಳನ್ನು ಯಾವುದೇ ಉಪಕರಣದ ಸಹಾಯವಿಲ್ಲದೆ ಬೀಳುವ ಜಲಪಾತಕ್ಕೆ ವಿರುದ್ಧವಾಗಿ ಪ್ರಪಾತದ ಅಂಚಿನಿಂದ ಧೋ ಎನ್ನುವ ಮಳೆಯಲ್ಲಿ ಹತ್ತುವಾಗ ಸಿಕ್ಕ ಆ ಎದೆ ಝಲ್ಲೆನಿಸು ಮೋಜು ಇನ್ನೆಲ್ಲಿಂದ ಸಿಗಬೇಕು ಹೇಳಿ?

ತುಂಬಾ ಹೊತ್ತಿನ ಪರಿಶ್ರಮದ ನಂತರ ಕ್ಷಿರಧಾರೆಯ ಮಧ್ಯಮ ಹಂತ ತಲುಪಿದಾಗ ಆ ಕ್ಷಿರಧಾರೆಯ ನಿಜ ಅಂದವ ನೋಡಿ ಮಂದಹಾಸದೊಂದಿಗೆ ಮೂಕವಿಸ್ಮಿತರಾದೆವು. ಚಾರಣ ಪ್ರಿಯರಿಗೆ ಇಂತ ಸಾಧನೆಯಲ್ಲಿ ಸಿಗುವ ಕುಶಿ ಬೇರೆಯವರಿಗೆ ಹುಚ್ಚುತನ ಎನಿಸಿದರೂ ಅದರ ಸವಿ ಅನುಭವಿಸಿ ತಿಳಿದವರಿಗೇ ಗೊತ್ತು ಅನ್ನಿ. ಮಲೆಮನೆ ಜಲಪಾತವನ್ನು ಮದುವಣಗಿತ್ತಿಯ ರೂಪದಲ್ಲಿ ನೋಡಬೇಕಾದರೆ ಮಳೆಗಾಲದಲ್ಲೊಮ್ಮೆ ಭೇಟಿಕೊಡುವುದು ಒಳಿತು.
(ರಾ.ಹೊ.)

ಶುಕ್ರವಾರ, ಮೇ 25, 2012

ರಾಜನೀತಿ...

                                  ನಿಮ್ಮವ ನಾನು
ನಿಮಗಾಗಿ ನಾನು
ಗೆಲ್ಲಿಸಿರಿ ನೀವು
ಗುಲ್ಲೆಬ್ಬಿಸುವೆ ನಾನು
ಗಂಡಾಂತರದಲಿ ನೀವು
ಗಮ್ಮತ್ತಾಗಿರುವೆ ನಾನು

ನಿಮ್ಮೆಲ್ಲರ ವೋಟನು ಕೊಟ್ಟು ಗೆಲ್ಲಿಸಿರಿ
ನನ್ನ ಮಾಡಿ ನಿಮ್ಮ ವಾರಸುದಾರ
ನಾ ಸಾವಿರ ಭರವಸೆಯ ಸರದಾರ
ಆಗುವೆ ನಾ ನಿಮಗೆ ಅರಸ
ನಿಮ್ಮ ಏಳಿಗೆಗೆ ಶ್ರಮಿಸುವೆ ನಾನು
ಸ್ವಲ್ಪ ಜೇಬಿಗೆ ತಳ್ಳಿರಿ ನೀವು

ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ನಾನು
ಸಾವಿರ ಯೋಜನೆಯು ನಿಮ್ಮಯ ಹೆಸರಲ್ಲಿ
ಬೊಕ್ಕಸದ ಹಣವೆಲ್ಲ ಬಿಡುಗಡೆ ಮಾಡಿ
ದೊಡ್ಡ ಪಾಲು ನನಗೆ
ಸಣ್ಣ ಪಾಲು ನನ್ನ ಜೋತೆಯಲ್ಲಿರುವವರಿಗೆ
ಉಳಿದದ್ದು ಖಂಡಿತ ಹಂಚುವೆ ನಿಮಗೆ

ನಾ ನಿಮ್ಮ ಜಾತಿಯವನು
ನಿಮಗಾಗಿ ಸದಾ ಇರುವವನು
ನಿಮ್ಮ ಸೇವೆಯಲೇ ಸಂತಸ ಕಾಣುವವನು
ಎಂದೆಲ್ಲಾ ಹೇಳಿ ನಿಮ್ಮ ನಂಬಿಸಿ ನಾ
ಜಾತಿ ಮೀಸಲಾತಿಯ ಸಾಕಾರ ಮಾಡಿ
ಪೂರ್ಣ ಲಾಭವ ಮಾಡಿದವನು

ದೇಶವ ಕೈ ಮುಷ್ಟಿಯಲಿ ಕಟ್ಟಿಟ್ಟವನು
ಬೇಡ ಅಂದರು ಕುರ್ಚಿಯ ಬಿಡದವನು
ಹೊಸ ಹೊಸ ಹಗರಣವ ಪರಿಚಯಿಸುವನು
ಕಾಣದ ಕಪ್ಪು ಹಣವ ಸೃಷ್ಟಿಸಿದವನು
ಕೋಟಿ ಆಸ್ತಿಯ ಕೂಡಿಟ್ಟವನು
ಎಲ್ಲರ ಬಾಯನು ಮುಚ್ಚಿಸಿದವನು
(ರಾ.ಹೊ.)

ಭಾನುವಾರ, ಮೇ 13, 2012

ಇರಬೇಕು...

 ಸಪ್ತಪದಿ ತುಳಿದರಾಯಿತೇ,
ಸಂಸಾರವೆಂಬ ಸಾಗರದಲಿ
ಸುಲಭವಾಗಿ  ಇಜಲು ಗೊತ್ತಿರಬೇಕು

ಪ್ರೀತಿ ಮಾಡಿದರಯಿತೇ,
ಬಾಡಿದ ವದನದಲೂ ಮೂಗುತಿಯ
ಮೆರಗು ಮಾಸದಂತೆ ಇರಬೇಕು

ಮಾತು ಕೊಟ್ಟರಾಯಿತೇ,
ಮುಕ್ಕೋಟಿ ಕಷ್ಟಗಳು ಬಂದರೂ
ವಜ್ರದಂತೆ ಧ್ರಡತೆ ಮತ್ತು ಘನತೆ ಹೊಂದಿರಬೇಕು

ದೇವರಲಿ ವರವ ಬೇಡಿದರಾಯಿತೇ
ಆತ್ಮವು ಶರೀರದಲಿ ಅವಧ್ಯವಾದಂತೆ
ನಂಬಿಕೆಯು ಅಚಲವಾಗಿರಬೇಕು

ಸಂಭಂದವ ಮಾಡಿದರಯಿತೇ
ಅದು ಮುಂಜಾನೆಯಲಿನ ಇಬ್ಬನಿಯಂತೆ
ಶುಬ್ರ ಮನೋಹರವಾಗಿರಬೇಕು

ಜೀವವಿದ್ದರಾಯಿತೇ
ಇರುವಿಕೆಯು ಜೀವನಕೆ ಒಂದು
ಅರ್ಥ ಕೊಡುವಂತಿರಬೇಕು
(ರಾ.ಹೊ.)

ಗುರುವಾರ, ಮಾರ್ಚ್ 29, 2012

ಆ ತನಕ ....

ಓ ನನ್ನ ಮುದ್ದಿನ ಗೆಳತಿ  ನೀ ನನ್ನ ಪ್ರೀತಿಗೆ ಒಡತಿ
ಎಲ್ಲೆಂದರಲಿ ನೀನೆ ನನಗೆ ಕಾಣುತಿ
ಪದೇ ಪದೇ ಎನ್ನ ಮನಸನೇಕೆ ಕಾಡುತಿ

ಮನಸಿನ ಪಾಠಶಾಲೆಯಲಿ ಮಂದಾರ ಕುಸುಮವಾದೆ ನೀ
ಮುದ್ದಾಡಿ ಮಕರಂದವ ಮಂಥನ ಮಾಡಿದೆ ನೀ
ಸ್ನೇಹ,ಪ್ರೀತಿ ಜೊತೆ ಜೊತೆಯಾಗಿ ಜೀವನದ ಚೇತನವಾದೆ ನೀ

ಕಾಲ್ಪನಿಕ ಜೀವನವು ಕಲಾತ್ಮಕವಾಯಿತು
ಕಾದ ಕಂಕುಳವು ಕಸ್ತೂರಿ ಪರಿಮಳವಾಯಿತು
ಮನಸಿನ ಮಾತು ಮುಕ್ಕೋಟಿಯಾಯಿತು
ಓಹೋ ನಮ್ಮಿಬ್ಬರ ನಡುವಿನ ಪ್ರೀತಿ ಚಿನ್ಮಯವಾಯಿತು

ಅಯ್ಯೋ ಪ್ರೀತಿಯ ಜೇನು ಕರ್ಕೋಟಕವಾಯಿತೇಕೆ
ನಮ್ಮೀ ಪ್ರೀತಿಯು ಚಿರಾಯುವಾಗಿರಲೆಂದು
ನೀ ನನ್ನಿಂದ ದೂರ ಇಂದು
ಆದರಾಗಲ್ಲ ಮನಸಿಂದ ದೂರ ಎಂದು

ಏನಿರಲಿ ಎಲ್ಲಿಯವರೆಗೆ ನಾ ನಿನ್ನ ಪ್ರೀತಿಸುವೇನೋ
ಆ ತನಕ ನಿನ್ನ ನಾ ಮರಯೆನು
ಎಲ್ಲಿಯವರೆಗೆ ನೀ ನನ್ನ ಪ್ರಿತಿಸುವೆಯೋ
ಆ ತನಕ ನಿನ್ನ ನಾ ಹೇಗೆ ಮರೆಯಲಿ...
(ರಾ.ಹೊ.)

ಶುಕ್ರವಾರ, ಮಾರ್ಚ್ 23, 2012

ಹೊಸ ವರುಷ ಹರುಷ ತರಲಿ ...

ವಸಂತನ ಆಗಮನವ ಸ್ವಾಗತಿಸಲು
ಚಿಗುರಿ ನಿಂತ ಕುಸುಮಗಳು
ವೇದಿಕೆಗೆ ಬಂದ ಕೋಗಿಲೆಗಳು
ಕೈ ತುಂಬ ಕೆಲಸದಲಿ ದುಂಬಿಗಳು
ಬಗೆ-ಬಗೆಯ ಬಣ್ಣದ ಬಟ್ಟೆಯಲಿ ಪತಂಗಗಳು
ಸಿಹಿಯ ಕಂಪನು ಜಗಕೆ ಪಸರಿಸುತಿವೆ
ಯುಗಾದಿಯ ಶುಭಾಶಯಗಳು ನಿಮಗೆ...
(ರಾ.ಹೊ.)

ಶನಿವಾರ, ಮಾರ್ಚ್ 3, 2012

ನನ್ನವಳ ನೆನಪು...

ನನ್ನವಳ ನೆನಪು ನನಗರಿವಿರದಂತೆ
ಇನ್ನೂ ಯಾಕೋ ಕಾಡುತಿದೆ
ಈ ಪ್ರೀತಿಯೇ ಹೀಗೆ ವರುಷಗಳುರುಳಿದರು
ಮುದುಡಿದ ಮನಸಿನ ಮೂಲೆಯಲಿ ಮನೆಮಾಡಿ ಕುಳಿತಿದೆ
ಬೇಡ ಅಂದರು ವಸರಿತು ಪ್ರೀತಿಯ ಚಿಲುಮೆ
ನಮ್ಮಯ ನಡುವೆ ನಮಗರಿವಿರದಂತೆ
ಮೊದಲ ನೋಟವೆ ಆಯಿತು ಮುಗಿಲೆತ್ತರದ ಪ್ರೀತಿಗೆ ಮೆಟ್ಟಿಲು
ಸಂಬಂಧ ಬಿಗುವಾಯಿತು ಬಹಳ ಅಂತರ ಇದ್ದರು
ಪ್ರೀತಿಯ ತೆಪ್ಪದಲ್ಲಿ ವರುಷಗಳು ದಿನವಾದವು
ಕನಸು ಹರುಷ ಭಾವನೆಗಳು ಸಂಚಯನವಾದವು
ಆಕರ್ಷಣೆಯಿಂದ ಶುರುವಾದ ಪ್ರೀತಿ ಬರಬರುತ
ಗೊಂದಲಿನ ಗೂಡಿನಲ್ಲಿ ಸಿಕ್ಕ ಗುಬ್ಬಿಯಂತಾಯಿತು
ಒಮ್ಮಿಂದೊಮ್ಮೆ ಜ್ಞಾನೋದಯವಾದಂತೆ
ಸಂಬಂದವು ಹಲಸಿ ಹೊಲಸಾಗದಿರಲೆಂದು
ಪ್ರೇಯಸಿಯು ಗೆಳತಿಯಾದಳು ಮುಗ್ಗಲು ಬದಲಿಸಿದಂತೆ
(
ರಾ.ಹೊ.))

ಬುಧವಾರ, ಫೆಬ್ರವರಿ 15, 2012

ಕನಸಿನ ಹೂವು...

ನೀ ಹಣೆದ ಪ್ರೀತಿಯ ಜಡೆಯಲಿ
ಕನಸೆಂಬ ಹೂವನು ಕಟ್ಟಿ
ಮನಸೆಂಬ ಮುಡಿಯಲಿ  ಮುಚ್ಚಿಟ್ಟೆ
ಕನಸಿನ ಮಲ್ಲಿಗೆ ಮೆಲ್ಲಗೆ ಘಮ ಘಮಿಸಲು
ಮನಸು ಸುಮಧುರ ಆಹ್ಲಾದವ ಅಲೆಯಲಿ
ತನ್ನೊಲುಮೆಯ ತಂಗಾಳಿಯನು
ಪ್ರತಿ ಉಸಿರಲು ಭುಂಜಿಸಲು
ಹತ್ತಿರದ ವಡನಾಟ ಸುಖದ ನೋಂಪಿಯದ
ನಳನಳಿಸುವ ಕಿರೀಟವ ತೊಡಿಸಿ
ಹೊಸ ಆಸೆ ಗರಿಗೆದರಿ ಹಾರತೊಡಗಿದೆ...

ನನ್ನ ಚಿತ್ತ ನಿನ್ನಲಿ ಸ್ಥಿತವಾಗಿ
ಭಾವನೆಗಳು ಅನುರಕ್ತವಾಗಿ
ನಿನ್ನ ಸ್ಪರ್ಶ ವಿಹಿತವಾಗಿ
ನಿನ್ನೊಲುಮೆಯ ಮಾತು ಅನುರಾಗವಾಗಿ
ಇರುಳಿನ ಕನಸಿನ ಕೂಪದಿಂದ
ನಿನ್ನಿರುವಿಕೆಯು ನಸುಗಂಪು  ಮುಂಜಾನೆಯ
ಮನೋಭೂಮಿಕೆಯಲಿ ನೇಸರನ ಕಿರು ನೋಟದಂತೆ
ಬದುಕಿನ ಚಿತ್ರಣ ರಂಗಾಗಿಸಿದೆ...

ನಿನ್ನ ಆ ಅನಿರೀಕ್ಷಿತ ಅಗಳುವಿಕೆಯು
ನನ್ನ ಅಲುಗಾಡಿಸಿ ಅದರ ಪ್ರತಿಚ್ಛಾಯೆವೆಂಬಂತೆ
ಕನಸಿನ ಕಟ್ಟೆ ಒಡೆದು
ಬಾಡಿದ ಕನಸಿನ ಹೂವು ಕಣ್ಣಂಚಿನಲಿ ಕಂಬನಿಯಾಗಿ
ಕೆಳಗುರಿಲಿತು ಅದರಲಿ ಒಂದು ಹನಿ ಇಂದು
ಕವನವಾಗಿ ನಿಮ್ಮ ಮುಂದೆ...
(ರಾ.ಹೊ.)

ಶುಕ್ರವಾರ, ಜನವರಿ 27, 2012

ಪ್ರತಿ ಸಲದಂತೆ ....


ಪ್ರಿತುಸುವೆಯಾ ಎಂದು ನೀ ಕೇಳಿದಾಗ
ಮೆಲ್ಲಗೆ ಪ್ರೀತಿಗೆ ಸ್ವಾಗತ ಅಂದವ ನಾನು
ನನಗಾಗಿ ಕಾಯುವೆಯಾ ಎಂದಾಗ
ಇಹ ಜನುಮ ನಿನಗೆ ಮೀಸಲು ಅಂದವ ನಾನು
ಬಾಳ ಸಂಗಾತಿ ಆಗುವೆಯಾ ಎಂದಾಗ...
ಜನುಮ ಪರಮ ಪಾವನವಾಯಿತು ಅಂದು ಸಂತಸ ಪಟ್ಟವ ನಾನು
ಏನಾಯಿತೋ ಆ ದಿನ ನಿನಗೆ
ಪ್ರೀತಿಯ ಮರೆಯುವ ಸ್ನೇಹಿತರಾಗಿರುವ ಅಂದೆ
ನಾ ನೀ ಹೇಳಿದ್ದಕ್ಕೆಲ್ಲ ಆಯಿತು ಅಂದೆ
ಪ್ರತಿ ಸಲದಂತೆ ...

(ರಾ.ಹೊ.)

ಬುಧವಾರ, ಜನವರಿ 25, 2012

ಪದೇಪದೇ....


ಹದಿ ವಯಸ್ಸಿನ ಹರೆಯದ ಉನ್ಮಾದದಲಿ
ಹಿರಿಯರ ವಿಶ್ವಾಸ, ವಯಸ್ಸಿನ ಅಂತರಗಳೆಂಬ ಅಡೆತಡೆಗಳ ನಡುವೆ
ಟಿಸುಲೊಡೆದ ಕುಡಿಗೆ ಪ್ರೀತಿಯೆಂಬ ಪಟ್ಟವಕಟ್ಟಿ
ಪೊರೆಯುವ ಮನಸು ಮಾಡಿದೆವೇಕೆ..

... ನಮ್ಮಿಬ್ಬರ ನಡುವೆಯ ಪ್ರೀತಿ ತಪ್ಪು ಎಂದು ತಿಳಿದಿದ್ದರೂ
ಮನಸ್ಸಿಲ್ಲದ ಪ್ರೀತಿಗೆ ಪದೇ ಪದೇ ಮನಸು ವಾಲಿತೇಗೆ
ಆ ಸಮಯದಲಿ ನಡೆದ ಹುಚ್ಚು ಸಂಭಾಷಣೆಗಳ
ಆಧರಿಸಿ ನಮ್ಮದೇ ಪೆದ್ದು ಕಲ್ಪನಾ ಲೋಕವ ಕಟ್ಟಿಗೊಂಡು
ಬೇಡದ ಸಂಬಂಧವ ಸುಮ್ಮನೆ ಬರಮಾಡಿಕೊಂಡೆವಲ್ಲ

ಇಲ್ಲದ ನೆಪಮಾಡಿ ನೀನಿರುವಲ್ಲಿ ಬಂದೆ ನಿನ್ನ ನೋಡುವ ಕಾತರದಿಂದ
ಸದಾ ಅಲೆದಾಡುತಿತ್ತು ಆ ನಿನ್ನ ಸಹೋದರನ ಹದ್ದಿನ ಕಣ್ಣು
ಆದರೂ ಎಗ್ಗೆ ಇಲ್ಲದೆ ಕಣ್ಣಲೇ ಮೌನ ಸಂಭಾಸನೆಯ ಸಿಂಚನ
ಸಂತೋಷ-ಸಲ್ಲಾಪ ನಿನ್ನ ಸನಿಹವು ಸ್ವರ್ಗದ ಕಲ್ಪನೆಗೆ ಸಾಕಾರ
ಏನೋ ಪ್ರತಿ ಕ್ಷಣ ಕಾತುರ ಆತುರ ರೋಮಾಂಚನ

ಇದುವೇ ಚಿರಂತನವೆಂಬ ಭ್ರಮೆಯಲಿ ಸದಾ ನಾ....
ಎಲ್ಲಾ ನಾವೆಂದಂತೆ ಆದರೆ ಆ ದೇವರ ದೂಷಿಸುವರಾರು
ಹೆತ್ತವರ ನೆಪ ಮಾಡಿ ಏನೋ ಜ್ಞಾನೋದಯವಾದಂತೆ
ಆದರ್ಶ ಮಗಳಾಗುವತ್ತ ಮನಸು ಮಾಡಿದೆ ನೀ...

ಬೊಗಸೆಯಲ್ಲಿರುವ ಹೂವ ಅದುಮಿ,
ನೀ ಕಟ್ಟಿ ಕಾಪಾಡಬೇಕಾದ ಅರಮನೆಯ ಕೆಡವಿ
ನೀ ಬಿತ್ತಿ ಬೆಳೆಸಿದ ಆ ಪ್ರೀತಿಯ ಪೈರಿಗೆ ಬೆಂಕಿಯ ಇಟ್ಟು
ನೀ ತಿನಿಸಿ ಪೊರೆದ ಕುದುರೆಯ ಕಾಲು ಕಡಿದು ಕಟುಕನಾದೆಯಲ್ಲ..

ಈ ಸಂಬಂದಾಗಲೇ ಹೀಗೆ
ಹೂವ ಹಿಸುಕಿದರೂ ಅದು ಬೀರುವ ಸುವಾಸನೆಯು ಸುತ್ತ ಪಸರಿಸುವಂತೆ
ಹಳೇ ನೆನಪುಗಳು ಪದೇಪದೇ ಪಿಸುಗುಡುತಿದೆ...

(ರಾ.ಹೊ.)