ಮಂಗಳವಾರ, ಫೆಬ್ರವರಿ 19, 2013

ನಿಶ್ಚೆತಾಂಬುಲ:)

ಎಂದಿಲ್ಲದ ಮನಕೆ ಇಂದೇಕೋ ತವಕ
ನನ್ನರಗಿಣಿಯ ಇನಿಯನಾಗುವ ತನಕ
ನನ್ನೆದೆಯ ಆಸೆಯ ಕುಸುಮದ ಮಕರಂದವು
ಜೇನ ಕಂಪ ಬೀರಲು ನಿಶ್ಚಯವಾಗುತಿದೆ ಸುದಿನ

ಹೆ೦ಗಳೆಯರು ಹಿರಿಯರು ನಗುಮೊಗದ ಸುತ್ತು
ತಟ್ಟೆಯಲಿ ಅರಿಶಿನ ಕು೦ಕುಮ ವೀಳ್ಯವು
ಬಗೆ ಬಗೆಯ ಹಣ್ಣು ಹಂಪಲು ಹರಿವಾಣದಲಿ
ಅಟ್ಟೆ ಮಲ್ಲಿಗೆಯ ಕಟ್ಟು ಕೆಂಪು ಗೊಲಾಬಿಯ ಇಟ್ಟು


ಪಂಚಾಂಗ ಅಕ್ಷತೆ ಶುಭ ಸೂಚಿಸತುತಿರಲು
ಸಗಣಿ ಸಾರಿಸಿದ ಅಂಗಳದ ಅಂಕಣದಲಿ
ತುಂಬುಚಪ್ಪರದ ತಂಪಿನಡಿಯ ಚಾವಡಿಯಲ್ಲಿ
ಗುಸುಗುಸು ಕುಡಿನೋಟಗಳೆಲ್ಲದರ ನಡುವೆ


ಮನೋಕೋಶದ ತುಂಬ ನನ ರಾಧೆಯೇ ತುಂಬಿರಲು
ನೆನಪ ಹೂ ವನದಲ್ಲಿ ಮೈಮರೆತು ಕುಳಿತಿಹೆನು
ಇಂಚಿಂಚು ಕರಗುತ್ತ ಕಳೆದುಹೋಗುವ ಮೊದಲು
ನನ್ನೆದೆಯ ಹೂ ಅರಳಿಸಿ ಎದೆಭಾರ ಕಳೆಯಿಸು


ಬೆನ್ನಲೇ ಬೆಳಕನಿಟ್ಟು ನಿನ ದಾರಿಯ ಅರಸುತ
ಮೈದಳೆಯಿತು ಮನವು ಮಿಂಚುಹುಳದಂತೆ
ಓ ನನ್ನ ಅರಗಿಣಿಯೇ ಇಣುಕಿಯೇ ಸುಸ್ತೆ
ಸಾವಿರ ಬಾಳ ಫಲಗರೆವ ಒಂದು ಕುಡಿ ನೋಟಕೆ


ಮೊರದಗಲ ಮುಖ ಮಾಡಿ ಮೆಲ್ಲಗೆ ಬಳುಕುತ
ಮುಡಿತು೦ಬ ಮಲ್ಲಿಗೆ ಬೆನ್ನ ತು೦ಬ ಕೇಶರಾಶಿ
ತು೦ಬು ನೆರಿಗೆಯ ಸೀರೆ ನಸುನಾಚಿ ಬ೦ದಿಹಳು
ನನ್ನಗಲ ಎತ್ತರಕೆ ಸಾಕು ಈ ಪುಟ್ಟ ಪಾರಿವಾಳ

ರಾ.ಹೊ