ಭಾನುವಾರ, ಜನವರಿ 13, 2013

ವರ್ಷ ಧಾರೆ

 
ಅಗಲುವಿಕೆಯ ವಿರಹ ವೇದನೆಯ ತಾಳಲಾಗದೆ
ವಸುದೆಯು ಬಾಡಿ ಕಳೆಗುಂದಿದ ವದನದಲಿ 
ವರುಣನ ಬರುವಿಕೆಯ ನೋಡ್ತವ್ಲೆ ....
ವರುಣನ ಮನದಲಿ ಮನೆ ಮಾಡಿದ ಕಾಮನೆಗಳ
ಕಾರ್ಮೋಡಗಳು ಒಳಗೊಳಗೆ ತಿಕ್ಕಾಟ ಮಾಡಿ 
ವಸುದೆಯ ಮೈ ಬಿಸಿಯ ಬಯಸಿ 
ಅವಳ ಸಾನಿಧ್ಯಕ್ಕೆ ಹತೊರಿತವ್ನೆ ...
ಕೂಡಿಟ್ಟ ಕಾಮನೆಗಳು 
ವರ್ಷ ಧಾರೆಯಾಗಿ ಜಿನುಗಿ 
ವಸುದೆಯ ಮೈ ತೋಯ್ದು
ಹಸಿರ ಉಡಿಗೆ ತೊಡಿಸಿ
ಹೊಸ ಮದುವಣಗಿತ್ತಿಯಾಗಿಸಿ
ಕಾಮನಬಿಲ್ಲಿನ ಕಿರೀಟ ತೊಡಿಸಿ
ಅವಳ ಜೀವ ನಾಡಿಯಾಗಿ ಹರಿದವ್ನೆ ...
ಇತ್ತ ಮುಗಿಲ ಮರೆಯಲಿ 
ಇದ ಕಂಡು ಕಾಣದಂತೆ ರವಿಯು
ಇಣುಕು ನೋಟವ ಬೀರ್ತವ್ನೆ ... 
ರಾ.ಹೊ

ಶುಕ್ರವಾರ, ಜನವರಿ 11, 2013

ಅನುದಿನವು ಅರುಣೋದಯವಾಗಲಿ

ಮೋಹದ ಪರದೆಯ ಮುಸುಕ ಸರಿಸಿ
ಪ್ರೀತಿಯ ಪರವಶತೆಯಿಂದ ಹೊರ ಬಂದು
ಅವಲೋಕಿಸು ನನ್ನ ನೈಜತೆಯನ್ನ
ಇಜಾಡು ಪಾರದರ್ಶಕ ತಿಳಿಗೊಳದಲ್ಲಿ


ಮನಸಿನ ಮಾತ ಕೇಳು
ಕನಸಿಗೆ ಶೀರ್ಷಿಕೆ ಆಗು
ಜೀವ ಭಾವವ ಬೆಸೆಯು
ಒಲವ ಹೂ ಮಳೆ ಹರಿಸು

ನನ್ನ ಬಾಳ ಉಸಿರಾಗಿ
ನನ್ನೊಲುಮೆಯ ಮಾತ ಕೇಳಿ 
ನನ್ನೆದೆಯ ತಂಪು ಮಾಡು
ಈ ಜೀವಕೆ ಹೊಸ ಕಂಪ ಬೀರು


ಕಣ್ಣಿನ ಕನಸಿಗೆ ಬಣ್ಣವ ತುಂಬಿ 
ಅಮೃತದ ಹನಿಯ ಸವಿಯ ಉಣಿಸು
ಮಧುರಾನುಭೂತಿಗೆ ನಾಂದಿ ಹಾಡಿ
ಬೆಳಕಾಗಿಸು ಬಾ ಈ ಬಾಳ

ನಿನ್ನ ಸಾಮಿಪ್ಯದಲಿ ತುಟಿಗಳು
ಮಾತು ಹೊರಡದೆ ಸುಮ್ಮನಿರಲು
ನಿನ್ನ ಆ ಹೂ ಮುತ್ತ ಮನ ಬಯಸಿದೆ
ಒಮ್ಮೆ ಎತ್ತಿ ಬಿಗಿದಪ್ಪಿ ಮುದ್ದಾಡಲೇ?


ಆ ಮುದನೀಡುವ ನೆನಪುಗಳು
ಸದಾ ಕನಸಕಾಣುವ ಮನಸುಗಳು
ಒಲವ ಚಪ್ಪರದಲಿ ನಿನ್ನ ಪೂಜಿಸುತ
ಅನುದಿನವು ಅರುಣೋದಯವ  ಆಶಿಸುವೆ 
ರಾ.ಹೊ

ಭಾನುವಾರ, ಜನವರಿ 6, 2013

ಪ್ರೀತಿ ಚಿರಂತರ...


ಸ್ನೇಹದ ಮೊಗ್ಗಲಿ ಅನುರಾಗವು ಅರಳಿ ಪ್ರೀತಿಯ ಕಂಪ ಸೂಸಿ
ಗೆದ್ದಲು ಹಿಡಿದ ಮನಸನು ತಿಳಿಯಾಗಿಸಿತು
ಕಾರಣವಿಲ್ಲದೆ ಹುಟ್ಟುವ ಪ್ರೀತಿ ರೆಪ್ಪೆ ಮಿಡಕುವದರಲ್ಲಿ
ಸ್ವಚ್ಛಂದಮಯ ಕನಸುಗಳಿಗೆ ಹಾತೊರೆಯುತ್ತಿದೆ

ನಿನ್ನ ಸವಿ ಮಾತು ಸದಾ ಸಪ್ತ ಸ್ವರದಂತೆ
ನಿನ್ನ ಪ್ರತಿ ನಗುವಿನಲು ಚಂದಿರನ ಸಂಚಲನ
ನಿನ್ನ ನೀಲ ಕಂಗಳಲಿ ಅದೆಂತಾ ಮಿಂಚು
ನಿನ್ನ ಹಾವ ಭಾವದಲಿ ಅದೇನೋ ಸಡಗರ
ನಿನ್ನ ಮುಂದೆ ತೃಣ ಮಾತ್ರ ಸಿರಿ ಭೋಗ
ನಿನ್ನ ಕನಸನ್ನು ನನ್ನ ಕನಸಂತೆ ಕಾಣುವೆ
ನಿನ್ನ ಪ್ರತಿ ಹೆಜ್ಜೆಯಲ್ಲೂ ಒಲವ ಮಳೆ ತರುವೆ
ನಿನ್ನ ಸನಿಹವೇ ಸದಾ ಸುಂದರ ಸುಮಧುರ
ನಿನಗಾಗಿ ಹುಟ್ಟಿದ ಈ ಪ್ರೀತಿ ಚಿರಂತರ
ಇನ್ನೂ ಯಾಕೆ ಈ ವಿರಹದ ಅಂತರ...

ಶನಿವಾರ, ಡಿಸೆಂಬರ್ 29, 2012

ಮನಸಿನ ಮಿಡಿತ ಸುಳ್ಳಾಗಲಿಲ್ಲ...

ಮೊದಲ ಪ್ರೀತಿಯ ಅನುಭೂತಿಯು
ಮುಂಜಾನೆಯ ಮುತ್ತಿನ ಹನಿಯಾದರೆ
ಇನ್ನೊಮ್ಮೆ ಚಿಮ್ಮಿದ ಅನುರಾಗದ
ವರ್ಷ ಧಾರೆಯ ಪುಟ್ಟ ಹನಿಯು
ಶುದ್ಧ ಧವಳತೆಯ ಮುತ್ತಾಯಿತು
ಮನಸಿನ ಚಿಪ್ಪಿನಲ್ಲಿ ಶಾಶ್ವತವಾಯಿತು

ಊಹಿಸದೇ ಮನಸ್ಸನ್ನು ಹೊಕ್ಕು ಕಚಗುಳಿಯಿಟ್ಟು
ಹೃದಯವನ್ನು ಹೂವಾಯಿಸಿ
ಅರಿವಿನಂತರಾಳಕ್ಕೆ ಪ್ರೀತಿ ಅನುರಣಿಸಿ
ಬೆಂದು ಬಸವಳಿದ ಬಾಳ ಸಂಪನ್ನಗೊಳಿಸಿ
ಬದುಕು ಮುಗಿಯುವವರೆಗೂ ಪ್ರೀತಿಯು 
ಕಿಂಚಿತ್ತೂ ಕಡಮೆಯಾಗದಂತೆ ಆರಾಧಿಸುವ

ಅದು ಚೈತ್ರ ತಂದ ಚಿಗುರಂತೆ
ಚೆಂದುಟಿಯ ಮೇಲೆ ನಳನಳಿಸುವ ಹೂನಗೆಯಂತೆ
ಕರ್ಣಾನಂದಕರವಾದ ಮಧುವಂತಿ ರಾಗದಂತೆ 
ಅತಿ ನವ್ಯ ರಸ ಗಾಯನದ ಅಲೆಯಲ್ಲಿ ತೇಲಿಸಿ 
ಹೃದಯಂತರಾಳದೊಳಕ್ಕೆ ಬಂದು ಸೇರಿತು
ಕಾಲ ಕಾಲವಾಗುವವರೆಗೆ..

ಆ ನಿನ್ನ ಸವಿಯಾದ ಸ್ನೇಹಲತೆ
ಏನ್ನನೋ ಹೇಳ ಬಯಸುವ ಕಂಗಳು
ಇರುಳನ್ನೇ ನಾಚಿಸುವಂಥ ಮುಂಗುರುಳು
ನಿತಂಬದವರೆಗಿನ ಜಾರಿದ ನವಿರಾದ ಜಡೆ
ಮನಸ್ಸನ್ನು ಕಲಕಿ ಮಧುರ ಭಾವದಲೆ ಎಬ್ಬಿಸಿ
ಸುಂದರ ಬಾಳ ಪ್ರಯಾಣಕೆ ಸುಪ್ಪತ್ತಿಗೆಯಾಯಿತು

ನೀ ಬದುಕನ್ನು ಇಷ್ಟ ಪಡುವ ರೀತಿಯಲಿ
ಆ ನಿನ್ನ ಹಾಲಿನ ಮನಸ್ಸಿನ ಆಸೆ ಆಕಾಂಕ್ಷೆಗಳ
ಸಾಕಾರಗೊಳಿಸಲು, ಸರಳತೆಯ ಮಾನದಂಡದಲಿ
ಭವಿಷ್ಯದ ಕನಸಿನ ಮಾಲೆಯನ್ನು ಬದಲಿಸಿ
ಬದುಕಿನ ನೀರವತೆಯನ್ನು ಕಳೆದು
ಯಶಸ್ಸಿನ ಸುಂದರ ಬಾಳು ಕಟ್ಟೋಣ
(ರಾ.ಹೊ.)

ಗುರುವಾರ, ಸೆಪ್ಟೆಂಬರ್ 13, 2012

ಹೊಂಬೆಳಕ ಆಶಿಸೋಣ

ಹುಟ್ಟುವಾಗ ಅಳುವಿಂದ ಆರಂಭಿಸುವ ನಾವು
ಜನುಮ ಪೂರ್ತಿ ನಗುವನ್ನೇ ಬಯಸುವೆವು
ಹಣದ ಮೋಹದ ಮುಂದೆ
ಪ್ರೀತಿ ಸಂಭಂದಗಳು ಮಂಕಾಗುವುದೇಕೆ

ಜಾತಿ ಧರ್ಮ ಮೇಲು-ಕೀಳೆಂಬ ಅಂತರವ ಹುಟ್ಟುಹಾಕಿ
ಮಾನವತೆಯನ್ನು ಮರೆಯುವತ್ತ ಸಾಗಿದೆವೇಕೆ ಪಯಣ
ಯೋಗ ಧ್ಯಾನವ ಮೀರಿ ಸತ್ಯ ದೇವತೆಯ ಮರೆತು
ಭೋಗ ಕಾಮನೆ ಪಡೆಯುವತ್ತ  ಚಿತ್ತ ವಾಲುವುದೇಕೆ

ಹುಟ್ಟು-ಸಾವು ಸಹಜದಂತೆ ಸೋಲು ಗೆಲವು ಸಾಮಾನ್ಯ
ಸಂತಾಪ ಸಮಾಧಾನಕ್ಕಿಂತ  ಪ್ರೋತ್ಸಾಹದ ಕಂಪ ಸೂಸು
ಭರವಸೆಯು ಭರಚುಕ್ಕಿಯಾಗಿ ಬಾಳ ಬೆಳಕಾಗಿ
ಸೋದರ ಸಮಾನತೆಯ ಸೊಂಪು ಹಾಕು

ಕನಸು ಎಂದಾದರು ಕಪ್ಪು-ಬಿಳುಪು ಅಗುವುದುಂಟೆ
ಆಶಿಸೋಣ ಜೀವನ ಕಾಮನಬಿಲ್ಲಿನ ಚಿತ್ತಾರ
ಆಸೆ ಅಸೂಯೆಯ ಅರಗಿಸಿ
ಸ್ನೇಹದ ಕದಂಬ ಬಾಹುವನ್ನು ಎಲ್ಲೆಡೆ ಚಾಚೋಣ
(ರಾ.ಹೊ.)

ಗುರುವಾರ, ಆಗಸ್ಟ್ 30, 2012

ಸೋಜಿಗದ ತಾಣ ಕರಿಕಾನಮ್ಮನ ಬೆಟ್ಟ

ಹೊನ್ನಾವರದ ಸುಂದರ ರಮಣೀಯ ಸ್ಥಳಗಳಲ್ಲಿ ಪಶ್ಚಿಮ ಘಟ್ಟದ ಮಡಿಲಲ್ಲಿರುವ ಕರಿಕಾನ ಅಮ್ಮನವರ ಬೆಟ್ಟವೂ ಒಂದು. ಜಾಸ್ತಿ ಪ್ರಚಾರವಿಲ್ಲದೆ ಕರಿ ಕಾನನದ ಸ್ವಚ್ಹ ಒಡಲಲ್ಲಿರುವ ಈ ದೇಗುಲವು ಆಸ್ತಿಕ ಮತ್ತು ನಾಸ್ತಿಕ ಎರಡೂ ವರ್ಗದವರು ಭೇಟಿ ಕೊಡಬೇಕಾದಂತ ಜಾಗವಿದು. ಹೊನ್ನಾವರದಿಂದ ಅರೆಅಂಗಡಿ ಮುಖಾಂತರ 8  ಕಿಲೋ ಮೀಟರ್ ಚಲಿಸಿದರೆ ಅಲ್ಲಿ ದೇವಸ್ತಾನದ ಕಮಾನು ನಿಮ್ಮನ್ನು ಸ್ವಾಗತಿಸುತ್ತದೆ. ಮುಂದೆ ಬೆಟ್ಟದ ಕಡಿದಾದ ಹಾದಿಯಲ್ಲಿ ಕಗ್ಗಾಡಿನ ನಡುವೆ 4 ಕಿಲೋ ಮೀಟರ್ ಸಂಚಾರಿಸುತ್ತ ದೇಗುಲವ ಕ್ರಮಿಸುದೇ ಒಂದು ಸುಂದರ ಅನುಭೂತಿ.

ಸಾಧು ಶ್ರೀಧರ ಸ್ವಾಮಿಯವರು ಈ ಸುಂದರ ಪರಿಸರದಲ್ಲಿ ದೈವಿಕತೆಯ ನೆಲೆಯನ್ನು ಗುರುತಿಸಿ ೧೮ನೇ ದಶಕದಲ್ಲಿ  ಕರಿಕಾನ ಬೆಟ್ಟದ ತುದಿಯ ಸಮೀಪ ದೇವಿಯ ದೇವಸ್ತಾನವನ್ನು ನಿರ್ಮಿಸಿದರು ಎನ್ನಲಾಗಿದೆ. ಮೊದಲಿನಿಂದಲೂ ಈ ಸಾನಿಧ್ಯದಲ್ಲಿ ಸ್ವಚ್ಛತೆಗೆ ಮೊದಲ ಪ್ರಾಶಸ್ತ್ಯ ಕೊಡುತ್ತ ಬಂದಿದ್ದು ಸ್ವಲ್ಪ ಏನಾದರು ಹೆಚ್ಚುಕಡಿಮೆಯಾದಲ್ಲಿ ಹುಲಿಯು ದೇವಸ್ತಾನಕ್ಕೆ ಬರುತ್ತವೆ ಎಂಬ ಪ್ರತೀತಿ ಇದೆ.  ಈಗಲೂ ಆಸ್ತಿಕ ಭಾಂದವರು ಮತ್ತು ಬೆಟ್ಟದ ತಪ್ಪದ ಗ್ರಾಮದಲ್ಲಿರುವ ಗ್ರಾಮಸ್ತರು ಭೇಟಿ ನೀಡುವುದರೊಂದಿಗೆ ಆ ತಾಯಿಯ ಆಶೀರ್ವಾದ ಪಡೆಯುವುದರೊಂದಿಗೆ ಆ ಸುಂದರ ಪರಿಸರದಲ್ಲಿ ಸಂತಸವ ಮನಕಾಣುತ್ತಿದ್ದಾರೆ . ಇಲ್ಲಿಂದ ಕೆಲವು ಮೈಲುಗಲ ಅಂತರದಲಿ ಒಂದಡಿಕೆ ಎಂಬ ಶಿವನ ಕ್ಷೇತ್ರವಿದ್ದು ಇಲ್ಲಿ ಸೋಜಿಗವೆಂಬಂತೆ ಒಂದು ಅಡಿಕೆ ಮರವಿದ್ದು ಅದರಲಿ ಒಂದೇ ಅಡಿಕೆ ಕಾಯಿ ಆಗುತ್ತದೆ ಎನ್ನಲಾಗುತ್ತದೆ.

ಅರ್ಚಕ ಕುಟುಂಬವೊಂದು ದೇವಿಯ ಪೂಜಾ ಕೈಖರ್ಯವನ್ನು ಕ್ರಮಬದ್ಧವಾಗಿ ನೋಡಿಕೊಳ್ಳುತ್ತಿದ್ದು ಕೆಲವು ವಿಶೇಷ ದಿನಗಳಲ್ಲಿ ಸಮಸ್ತ ಭಕ್ತ ಭಾಂದವರ ಸಮ್ಮುಖದಲ್ಲಿ ಭಾರಿ ವಿಜ್ರಂಬನೆಯಿಂದ ವಿವಿಧ ಧರ್ಮಿಕಾಚರಣೆಗಳು ನಡೆಯುತ್ತಾ ಬಂದಿರುತ್ತದೆ. ದೇಗುಲದ ಸಾನಿಧ್ಯದಲ್ಲಿ ತಂಗಲು ತಕ್ಕಮಟ್ಟಿನ ವ್ಯವಸ್ತೆಯಿದ್ದು, ಮೊದಲೇ ಹೇಳಿದಲ್ಲಿ ಅರ್ಚಕರು ಫಲಾಹಾರದ ವ್ಯವಸ್ತೆ ಮಾಡುತ್ತಾರೆ.

ಮುಂಗಾರಿನ ಮುಂಜಾನೆಯ ಮಂಜಿನಲಿ ಚಿಲಿ-ಪಿಲಿ ಹಕ್ಕಿಯ ನಿನಾನದ ನಡುವೆ ವಾಹನದ ಪ್ರಯಾಣದ ಬದಲು ನಡಿಗೆಯ ನಡಿಗೆಯ ಮೂಲಕ ಬೆಟ್ಟಕೆ ಚಾರಣ ಮಾಡುವುದೇ ಒಂದು ಚೆಂದ. ದೂರದ ಅರಬ್ಬೀ ಸುಮದ್ರದಲ್ಲಿನ ಸೂರ್ಯಾಸ್ತದ ಸಡಗರವ ಸವಿಯುತ್ತ ಸಂಜೆಯ ತಂಗಾಳಿಯನು ಅನುಭವಿಸುವುತ್ತ ಆ ದಿವ್ಯ ಸಾನಿಧ್ಯದಲ್ಲಿ ಕೂತರೆ ಎಂತವರನ್ನೂ ಮಂತ್ರಮುಗ್ಧನಾಗಿರಿಸುವುದರಲ್ಲಿ ಅನುಮಾನವಿಲ್ಲ.ಮೋಡಗಳ ಸುಂದರ ಕಣ್ಣುಮುಚ್ಚಾಲೆ ಆಟವ ನೋಡಲು ಮಳೆಗಾಲದಲ್ಲಿ ಭೇಟಿ ನೀಡುವುದು ಒಳಿತು.

ನಿಮ್ಮ ಕರಿಕಾನ ಬೆಟ್ಟದ ಭೇಟಿಯ ಜೊತೆಗೆ ರಾಮತೀರ್ಥ, ಅಪ್ಸರಕೊಂಡ, ಧಾರೇಶ್ವರ ಮುಂತಾದ ಸುತ್ತಮುತ್ತಲಿನ ರಮಣೀಯ ಜಾಗಕ್ಕೂ ಭೇಟಿ ಕೊಡಬಹುದು.
(ರಾ.ಹೊ.)

ಸೋಮವಾರ, ಜುಲೈ 2, 2012

ಮಳೆಗಾಲವು ಮುದ ನೀಡಲಿ ನಿಮಗೆ...

ಪಡುವಣದಿ ಬರುತಿದೆ ಕಾರ್ಮೋಡಗಳು
ಆಗಸದಲಿ ಕರಿ ಮೋಡದ್ದೇ ಬಹು ಪಾಲು
ಶುರುವಾಯಿತು ವರುಣನ ದರ್ಬಾರು
ಇದಕೆ ಹಾಂತೆಗಳ ನರ್ತನದ ಮೇರು

ಮಳೆ ಬಂದರೆ ನಮ್ಮೂರ ವೈಧ್ಯರಿಗೆ ಹಣದ ಕೊಯ್ಲೇ ಕೊಯ್ಲು
ಎಲ್ಲೆಂದರಲಿ ಬಣ್ಣ ಬಣ್ಣದ ಕೊಡೆಗಳದ್ದೆ ಕಾರು-ಬಾರು
ಆಟಿಯೆಂದರೆ ನಮ್ಮೊರ ಭಟ್ಟರಿಗೆ ಬರೀ ಬೋರು
ಅದುವೇ ಬೀದಿ ನಾಯಿಗಳಿಗೆ ಸ್ವರ್ಗಕ್ಕೆ ಮೂರೇ ಗೇಣು

ನಗರದಲ್ಲೋ ಟ್ರಾಫಿಕ್ ಜ್ಯಾಮೋ -ಜ್ಯಾಮ್
ಎಡೆಯಿಲ್ಲದೆ ಅಪಘಾತಗಳು ಸಾಲು ಸಾಲು
ರೋಡಿನಲಿ ಚರಂಡಿಯ ನೀರು ರಾಡಿ ಮಾಡಿ
ಜನ-ಜೀವನವು ಒಂದೇ ಮಳೆಯಲಿ  ಬುಡಮೇಲು

ಸಮುದ್ರ ರಾಜನ ಕೊನೆಯಿಲ್ಲದ ಘನ ಘೋರ ಶಂಖ ನಾದ
ತೋಟದಲ್ಲಿ ಗೊಂಕ್ರಕಪ್ಪೆಗಳ ಮೇಳ ಕೊಯ್ಯಂ ಕೊಟ್ರಂ
ಅಂಗಳದ ಕೊನೆಯಲ್ಲಿನ ಕೊಳೆಯಲ್ಲಿ ಟಿಸಿಲೊಡೆದ ಕಳೆ
ಕಂಬಳಿಯ ಕವಚ ತೊಟ್ಟು ನೇಗಿಲೆತ್ತಿ ಹೊರಟ ರೈತ

ಆಗಸದಲಿ ಕರಿ ಮೋಡದ್ದೇ ಬಹು ಪಾಲು
ಶುರುವಾಯಿತು ವರುಣನ ದರ್ಬಾರು
(ರಾ.ಹೊ.)